ಕಾಲುವೆ ದುರಸ್ತಿ ಕಾಮಗಾರಿ ನಿಧಾನ: ಅಧಿಕಾರಿಗಳ ವಿರುದ್ಧ ಸಚಿವ ಶ್ರೀರಾಮುಲು ಮೊಕ್ಕಾಂ ಹೂಡಿ ಪ್ರತಿಭಟನೆ

ಬಳ್ಳಾರಿ ಬಳಿ ರಾಜಕಾಲುವೆ ದುರಸ್ತಿ ಕಾಮಗಾರಿಗೆ ವೇಗ ನೀಡಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ದುರಸ್ತಿ ಕಾಮಗಾರಿ ಮುಗಿಯುವವರೆಗೂ ತಾವು ಇಲ್ಲಿಂದ ತೆರಳುವುದಿಲ್ಲ ಎಂದು ಹಠ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಶ್ರೀರಾಮುಲು
ಶ್ರೀರಾಮುಲು

ಬಳ್ಳಾರಿ: ಬಳ್ಳಾರಿ ಬಳಿ ರಾಜಕಾಲುವೆ ದುರಸ್ತಿ ಕಾಮಗಾರಿಗೆ ವೇಗ ನೀಡಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ದುರಸ್ತಿ ಕಾಮಗಾರಿ ಮುಗಿಯುವವರೆಗೂ ತಾವು ಇಲ್ಲಿಂದ ತೆರಳುವುದಿಲ್ಲ ಎಂದು ಹಠ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಕಾಲುವೆಗೆ ನೀರು ಹರಿಸುವವರಿಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಸಚಿವ ಶ್ರೀರಾಮುಲು ಕಾಮಗಾರಿ ಸ್ಥಳದಲ್ಲಿ ಮಲಗಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬಳ್ಳಾರಿ ತಾಲೂಕಿನ ಪಿಡಿ ಹಳ್ಳಿ ಬಳಿ ವೇದಾವತಿಗೆ ಹಾಕಿದ ಮೇಲ್ಸೇತುವೆ ಪಿಲ್ಲರ್ ದುರಸ್ತಿ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ನೀರು ಬಿಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಎಕರೆ ಬೆಳೆ ಹಾನಿ ಆತಂಕ ಉಂಟಾಗಿತ್ತು. ಇದರಿಂದಾಗಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ಸಚಿವ ಶ್ರೀರಾಮುಲು ಮುಂದಾಗಿದ್ದಾರೆ.

ದುರಸ್ತಿ ಕಾರ್ಯ ಮುಗಿಯುವವರೆಗೂ ಅಲ್ಲೇ ವಾಸ್ತವ್ಯ ಹೂಡಲು ಶ್ರೀರಾಮುಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ವೇದಾವತಿ ನದಿ ದಂಡೆಯ ಬಳಿ ಹಾಸಿಗೆಯನ್ನು ಹಾಸಿಕೊಂಡು ಅಲ್ಲೇ ಮಲಗಿದ್ದಾರೆ. ಅದೇ ರೀತಿ ಇಂದು ಕೂಡ ಅಲ್ಲೇ ಸ್ನಾನ ಮಾಡಿ, ತಿಂಡಿ ಸೇವಿಸಿದ್ದಾರೆ. 

ಶ್ರೀರಾಮುಲು ಬಿ.ಡಿ.ಹಳ್ಳಿ ವೇದಾವತಿ ನದಿ ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದರು. ಹದಿನೈದು ದಿನದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಾಮಗಾರಿ ಕೈಗೆತ್ತಿಕೊಂಡಿರುವ ಸಂಸ್ಥೆಯ ಪ್ರತಿನಿಧಿಗಳು ಶ್ರೀರಾಮುಲು ಅವರಿಗೆ ತಿಳಿಸಿದರು. ಕಾಮಗಾರಿ ಮುಗಿಯುವವರೆಗೂ ಸ್ಥಳದಲ್ಲಿಯೇ ಇರುವುದಾಗಿ ಶ್ರೀರಾಮುಲು ತಿಳಿಸಿದರು. ಬಳಿಕ ಪೂಜೆ ಸಲ್ಲಿಸಿ, ಕಾರ್ಮಿಕರೊಂದಿಗೆ ಊಟ ಮಾಡಿ ಸ್ಥಳದಲ್ಲೇ ಮಲಗಿದ್ದರು. ಈ ಕುರಿತು ಮಾತನಾಡಿದ ಶ್ರೀರಾಮುಲು ಅವರು, ನಾನು ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ಇತ್ತೀಚೆಗೆ ಸುರಿದ ಮಳೆಗೆ ಸೇತುವೆ ಹಾಳಾಗಿದ್ದು, ದುರಸ್ತಿ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಕೆಲಸ ನೋಡಿಕೊಳ್ಳಲು ಮತ್ತು ಕಾರ್ಯಕರ್ತರೊಂದಿಗೆ ಇರಲು ನಾನು ಇಲ್ಲಿದ್ದೇನೆ ಎಂದು ಹೇಳಿದ್ದಾರೆ.

ಕಾಮಗಾರಿ ವಿಳಂಬವಾದರೆ ಹಗರಿ ಗ್ರಾಮ ಹಾಗೂ ಸುತ್ತಮುತ್ತಲಿನ ಕೃಷಿ ಹೊಲಗಳಿಗೆ ನೀರು ಹರಿಸಲು ಸಾಧ್ಯವಿಲ್ಲ. 3 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದು ನಿಂತಿರುವ ಬೆಳೆಗಳ ಬಗ್ಗೆ ಮಾತನಾಡುತ್ತಿದ್ದೇವೆ, ಅಲ್ಲಿ ರೈತರು ಕಾಲುವೆಯಿಂದ ನೀರಿಗಾಗಿ ಪರದಾಡುತ್ತಿದ್ದಾರೆ. ನಾವು ಶೀಘ್ರದಲ್ಲೇ ಹೊಸ ಸೇತುವೆಯನ್ನು ನಿರ್ಮಿಸುತ್ತೇವೆ ಮತ್ತು ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳು ವೆಚ್ಚವನ್ನು ಭರಿಸುತ್ತವೆ. ಹೊಸ ಸೇತುವೆಯ ಒಟ್ಟು ಬಜೆಟ್ ಸುಮಾರು 400-500 ಕೋಟಿ ರೂ.ಗಳಾಗಿದ್ದು, ಎರಡೂ ರಾಜ್ಯಗಳ ಸಿಎಂಗಳು ಈ ಬಗ್ಗೆ ಚರ್ಚಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು. 

ನಾಯಕರ ನಡುವೆ ಕ್ರೆಡಿಟ್ ವಾರ್
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ನಾಯಕರ ಜಟಾಪಟಿ ನಡೆಯುತ್ತಿದ್ದು, ರೈತರಿಗೂ ನೀರು ಹರಿಸುವ ವಿಚಾರದಲ್ಲಿ ಶಾಸಕ ನಾಗೇಂದ್ರ, ಸಚಿವ ರಾಮುಲು ಕ್ರೆಡಿಟ್ ವಾರ್‌ಗೆ ಮುಂದಾಗಿದ್ದಾರೆ. ವೇದಾವತಿ ನದಿಗೆ ಅಡ್ಡಲಾಗಿ ಇರುವ ಎಲ್‍ಎಲ್‍ಸಿ ಕಾಲುವೆ ರಿಪೇರಿ ಸ್ಥಳದಲ್ಲಿ ಸಚಿವ ಶ್ರೀರಾಮುಲು ರಾತ್ರಿಯಿಡೀ ವಾಸ್ತವ್ಯ ಹೂಡಿದ್ದಾರೆ. ಅದೇ ಸ್ಥಳದಲ್ಲಿ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಅವರು ಬಂದು ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. 

ಬಳಿಕ ಮಾತನಾಡಿದ ಅವರು, ಕಾಮಗಾರಿ ನಡೆಯುತ್ತಿರುವ ಸ್ಥಳವು ಅವರ ಕ್ಷೇತ್ರಕ್ಕೆ ಒಳಪಟ್ಟಿದ್ದು, ಅವರ ಭೇಟಿಯಲ್ಲಿ ರಾಜಕೀಯ ಏನೂ ಇಲ್ಲ. ರೈತರು ಶೀಘ್ರದಲ್ಲೇ ಇದರ ಪ್ರಯೋಜನ ಪಡೆಯುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ನಾಗೇಂದ್ರ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com