ಉಡುಪಿಯಲ್ಲೂ ಇದೆ ತೂಗು ಸೇತುವೆ: ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಗುಜರಾತಿನ ಮಾರ್ಬಿಯಲ್ಲಿ ತೂಗು ಸೇತುವೆ ಕುಸಿದು ಬಿದ್ದು ಭೀಕರ ದುರಂತ ಸಂಭವಿಸಿದ ಬೆನ್ನಲ್ಲೇ, ನಮ್ಮ ನಾಡಿನ ತೂಗು ಸೇತುವೆಗಳ ಸ್ಥಿತಿಗತಿಯ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ.
ಸೇತುವೆಯನ್ನು ನೋಡಲು ಬಂದಿರುವ ಪ್ರವಾಸಿಗರು.
ಸೇತುವೆಯನ್ನು ನೋಡಲು ಬಂದಿರುವ ಪ್ರವಾಸಿಗರು.

ಉಡುಪಿ: ಗುಜರಾತಿನ ಮಾರ್ಬಿಯಲ್ಲಿ ತೂಗು ಸೇತುವೆ ಕುಸಿದು ಬಿದ್ದು ಭೀಕರ ದುರಂತ ಸಂಭವಿಸಿದ ಬೆನ್ನಲ್ಲೇ, ನಮ್ಮ ನಾಡಿನ ತೂಗು ಸೇತುವೆಗಳ ಸ್ಥಿತಿಗತಿಯ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ.

ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅಪಾರ ಕೊಡುಗೆ ನೀಡಿರುವ ಕೆಮ್ಮಣ್ಣುವಿನ ತೂಗು ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು, ದುರಸ್ಥಿ ಕಾರ್ಯ ಮಾಡುವುದು ಅತ್ಯಗತ್ಯವಾಗಿದೆ.

ಜನರು ಓಡಾಡಲು ಅನುಕೂಲವಾಗುವ ಸಲುವಾಗಿ ಕೆಮ್ಮಣ್ಣುವಿನ ತೂಗು ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದೀಗ ಈ ತೂಗು ಸೇತವೆ ಪ್ರವಾಸಿ ತಾಣವಾಗಿ ಬದಲಾಗಿದೆ. ಪ್ರತೀನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹೊರಜಿಲ್ಲೆಯಿಂದ ವಿದ್ಯಾಭ್ಯಾಸಕ್ಕೆಂದು ಬರುವ ವಿದ್ಯಾರ್ಥಿಗಳು ತೂಗುಸೇತುವೆಯ ಜೊತೆಗೆ ಕಯಾಕಿಂಗ್ ಮತ್ತು ಬೋಟಿಂಗ್ ನ ಅನುಭವ ಪಡೆಯಲು ವಾರಾಂತ್ಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಪ್ರವಾಸಿ ತಾಣವಾಗಿ ಮಾರ್ಪಾಡಾಗಿರುವ ಸೇತುವೆಯ ಅಪಾಯ ಸ್ಥಿತಿಯಲ್ಲಿದ್ದರೂ ಜಿಲ್ಲಾಡಳಿತ ಮಾತ್ರ ಮೌನವಹಿಸಿದೆ. ಹೀಗಾಗಿ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ, ಅಪಾಯವಂತೂ ಕಟ್ಟಿಟ್ಟ ಬುತ್ತಿ.

1991ರಲ್ಲಿ ನಿರ್ಮಿಸಿದ ಈ ಸೇತುವೆಗೆ ನಿರ್ವಹಣೆಯೇ ಆಗಿಲ್ಲ. ಈ ಸೇತುವೆಯು ಪಡುಕುದ್ರು ಮತ್ತು ತಿಮ್ಮಣ್ಣಕುದ್ರುವನ್ನು ಸಂಪರ್ಕಿಸುತ್ತದೆ. ಉಡುಪಿ ಜಿಲ್ಲಾಡಳಿತಕ್ಕೆ ಅಗತ್ಯ ದುರಸ್ತಿ ಮಾಡುವಂತೆ ಮನವಿ ಮಾಡಲಾಗಿದೆ. ಒಂದು ಬಾರಿಗೆ ಕೇವಲ 15-20 ಜನರು ಮಾತ್ರ ಸೇತುವೆಯನ್ನು ದಾಟಬಹುದಾದರೂ, 280 ಅಡಿ ಉದ್ದದ ಮೇಲ್ವಿಚಾರಣೆಯಿಲ್ಲದ ಸೇತುವೆಯ ಮೇಲೆ ನೂರಾರು ಜನರು ಜಮಾಯಿಸಿದ ಉದಾಹರಣೆಗಳಿವೆ. ಕಾಂಕ್ರೀಟ್ ಸ್ಲ್ಯಾಬ್‌ಗಳಿಂದ ಮಾಡಿದ ಕೆಲವು ಭಾಗಗಳು ಹದಗೆಟ್ಟಿದ್ದರೆ, ಕೆಲವು ಸ್ಥಳಗಳಲ್ಲಿ ಕಬ್ಬಿಣದ ರೇಲಿಂಗ್‌ಗಳು ತುಕ್ಕು ಹಿಡಿದಿವೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೂಚಿಸಿರುವುದಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು, ಸೇತುವೆಯನ್ನು ಪರಿಶೀಲಿಸಿ, ಬಳಕೆಗೆ ಯೋಗ್ಯವಾಗಿದೆಯೇ ಎಂದು ಪರಿಶೀಲಿಸುವಂತೆ ಮತ್ತು ಅದರ ಸುರಕ್ಷತೆಯ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com