ನ.16 ಬೆಂಗಳೂರು ತಂತ್ರಜ್ಞಾನ ಶೃಂಗಸಭೆ, 16 ನಗರಗಳ 300 ಸ್ಟಾರ್ಟಪ್ ಭಾಗಿ: ಸಚಿವ ಅಶ್ವಥ್ ನಾರಾಯಣ

ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆಯ (ಬಿಟಿಎಸ್) 25ನೇ ವರ್ಷದ ಸಮಾವೇಶ ಈ ತಿಂಗಳ 16 ರಿಂದ 18ರವರೆಗೂ ನಡೆಯಲಿದ್ದು, ಶೃಂಗಸಭೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಐಟಿ-ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಸಚಿವ ಅಶ್ವಥ್ ನಾರಾಯಣ
ಸಚಿವ ಅಶ್ವಥ್ ನಾರಾಯಣ

ಬೆಂಗಳೂರು: ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆಯ (ಬಿಟಿಎಸ್) 25ನೇ ವರ್ಷದ ಸಮಾವೇಶ ಈ ತಿಂಗಳ 16 ರಿಂದ 18ರವರೆಗೂ ನಡೆಯಲಿದ್ದು, ಶೃಂಗಸಭೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಐಟಿ-ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆಯ (ಬಿಟಿಎಸ್) 25ನೇ ವರ್ಷದ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರಮೋದಿ ಅವರು ಮಾತನಾಡಲಿದ್ದು, ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಈ ಶೃಂಗಸಭೆ ಪ್ರಮುಖವಾಗಿದೆ ಎಂದರು. ಈ ಶೃಂಗಸಭೆಯಲ್ಲಿ 20 ದೇಶಗಳ 260 ತಜ್ಞರು, 575 ಪ್ರದರ್ಶಕರು ಭಾಗಿಯಾಗಲಿದ್ದು, ಸುಮಾರು 50 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. 

ನವೋದ್ಯಮಗಳನ್ನು ಪ್ರಸ್ತುತಪಡಿಸಲು ಸ್ಟಾರ್ಟಪ್‌ಗಳು ಮತ್ತು ಯುನಿಕಾರ್ನ್‌ಗಳ ಅತಿ ದೊಡ್ಡ ಸಭೆ ಇದಾಗಿದ್ದು, ಈ ಸಮಾವೇಶದ ಪ್ರಮುಖ ಥೀಮ್ ಟೆಕ್ 4 ನೆಕ್ಸ್ಟ್ ಜನರೇಷನ್ ಎಂದಾಗಿದ್ದು, ಇದು ಎಲೆಕ್ಟ್ರಾನಿಕ್, ಐಟಿ, ಡೀಪ್‌ಟೆಕ್, ಬಯೋಟೆಕ್ ಮತ್ತು ಸ್ಟಾರ್ಟಪ್‌ಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ಹೆಗ್ಗುರುತಾಗಿರುವ ಶೃಂಗಸಭೆಯ 25ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ರಜತಮಹೋತ್ಸವ ಸ್ಮರಣ ಪದಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿ ಬೆಂಗಳೂರಿನಲ್ಲಿ 25ಕ್ಕೂ ಅಧಿಕ ವರ್ಷ ಸೇವೆ ಪೂರ್ಣಗೊಳಿಸಿದ ಐಟಿಇ ಮತ್ತು ಬಯೋಟೆಕ್ ಕ್ಷೇತ್ರದ 35 ಕಂಪನಿಗಳನ್ನು ಗೌರವಿಸಲಿದ್ದಾರೆ ಎಂದು ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಮೆಗಾ ಟೆಕ್ ಶೋನಲ್ಲಿ ದೇಶಾದ್ಯಂತ 2000 ಸ್ಟಾರ್ಟಪ್ ಗಳು ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, 300 ಸ್ಟಾರ್ಟಪ್‌ಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಿವೆ. ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಸ್ಟಾರ್ಟ್‌ಅಪ್‌ಗಳಲ್ಲಿ 92 ಸ್ಟಾರ್ಟ್‌ಅಪ್‌ಗಳು ಐಟಿವಲಯದ್ದಾಗಿದ್ದು, ಬಯೋಟೆಕ್‌ನಿಂದ 60, ಎಐ ಮತ್ತು ಎಂಎಲ್ ಮತ್ತು ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್‌ನಿಂದ ತಲಾ 15, ಎಡ್ಯುಟೆಕ್ ಮತ್ತು ಫಿನ್‌ಟೆಕ್‌ನಿಂದ 14, ಎಲೆಕ್ಟ್ರಾನಿಕ್ಸ್ ಮತ್ತು ಮೊಬಿಲಿಟಿಯ  ತಲಾ 10  ಮತ್ತು ಸೈಬರ್‌ಸೆಕ್ಯುರಿಟಿಯಿಂದ 11 ಸ್ಟಾರ್ಟಪ್ ಗಳು, IT, AI & ML ಮತ್ತು ಬಯೋಟೆಕ್‌ನಂತಹ ಪ್ರತಿಯೊಂದು ವಿಭಾಗದಿಂದ ಸ್ಟಾರ್ಟ್‌ಅಪ್‌ಗಳು ಗೊತ್ತುಪಡಿಸಿದ ಕ್ಲಸ್ಟರ್‌ಗಳಲ್ಲಿ ಸ್ಟಾಲ್‌ಗಳನ್ನು ಹೊಂದಿರುತ್ತವೆ ಎಂದು ಮಾಹಿತಿ ನೀಡಿದರು.

ಈ ಶೃಂಗಸಭೆಯಲ್ಲಿ ಫ್ರೆಂಚ್ ದೇಶದ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋಸ್ ವರ್ಚುವಲ್ ಮೂಲಕ ಭಾಗಿಯಾಗಲಿದ್ದು, ಯುಎಇಯ ಸಚಿವರಾದ ಓಮರ್‌ಬಿನ್ ಸುಲ್ತಾನ್ ಅಲ್ ಉಲಾಮ, ಆಸ್ಟ್ರೇಲಿಯಾದ ವಿದೇಶಾಂಗ ಸಹಾಯಕ ಸಚಿವ ಟಿಮ್‌ವ್ಯಾಟ್ಸ್, ಪಿನ್‌ಲ್ಯಾಂಡ್‌ನ ವಿಜ್ಞಾನ ತಂತ್ರಜ್ಞಾನ ಸಚಿವ ಪೆಟ್ರಿಹ್ಯಾಂಕೋನನ್, ಅಮೆರಿಕದ ಕೈಂಡ್ರಿಯಲ್ ಸಿಇಓ ಮಾರ್ಟಿನ್ ಶೂಟರ್, ಭಾರತದ ಮೊದಲ ಯುನಿಕಾರ್ನ್ ಇನ್‌ಮೊಬಿ ಸಂಸ್ಥಾಪಕ ನವೀನ್ ತಿವಾರಿ ಸೇರಿದಂತೆ ಹಲವು ದಿಗ್ಗಜ ತಂತ್ರಜ್ಞಾನ ಉದ್ಯಮಿಗಳು ಭಾಗಿಯಾಗುವರು ಎಂದರು. ಸುದ್ದಿಗೋಷ್ಠಿಯಲ್ಲಿ ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ ರಮಣರೆಡ್ಡಿ, ಜಂಟಿ ನಿರ್ದೇಶಕ ಮೀನಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com