ಬೆಂಗಳೂರು: ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌​ ಕರ್ಮಕಾಂಡ; 2,400 ಠೇವಣಿದಾರರಿಗೆ 93 ಕೋಟಿ ರು. ವಂಚನೆ; ಐವರ ಬಂಧನ

ಸುಮಾರು 2,400 ಠೇವಣಿದಾರರಿಗೆ 93 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಚಾಮರಾಜಪೇಟೆಯಲ್ಲಿರುವ ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ನಿಂದ ವಂಚನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ ​ನ ಕರ್ಮಕಾಂಡ ಬಯಲಾಗಿದೆ. ಠೇವಣಿದಾರರ ಹಣವನ್ನ ದುರ್ಬಳಕೆ‌ ಮಾಡಿಕೊಂಡು, ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ ​ನಲ್ಲಿದ್ದ ಕೋಟ್ಯಂತರ ರೂಪಾಯಿ ಹಣ ಸಾಲ ನೀಡಿ ಆರ್ಥಿಕ ದಿವಾಳಿಗೆ ನೂಕಿ ಅಕ್ರಮವೆಸಗಿದ್ದ ಆರೋಪದಡಿ ಅದರ ಮಾಜಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಐವರನ್ನು ಕೆಂಪೇಗೌಡನಗರ ಪೊಲೀಸರು ಬಂಧಿಸಿದ್ದಾರೆ.

ಸುಮಾರು 2,400 ಠೇವಣಿದಾರರಿಗೆ 93 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಚಾಮರಾಜಪೇಟೆಯಲ್ಲಿರುವ ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ನಿಂದ ವಂಚನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

ಅಧ್ಯಕ್ಷ ಬಿ.ಎಲ್. ಶ್ರೀನಿವಾಸ್ (64), ಉಪಾಧ್ಯಕ್ಷ ಬಿ. ಈಶ್ವರ್ (71), ಸಾಲಗಾರರಾದ ದಯಾನಂದ ಹೆಗ್ಡೆ (50), ವಿ. ನಾಗೇನಹಳ್ಳಿಯ ಪಿ. ಚಂದ್ರಶೇಖರ್ (55) ಹಾಗೂ ಸುರಭಿ ಚಿಟ್ಸ್ ಸಂಸ್ಥೆಯ ಬಿ.ಟಿ. ಮೋಹನ್ (75) ಬಂಧಿತರು.

‘2011ರಲ್ಲಿ ಸ್ಥಾಪನೆಯಾದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌, ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಹಲವೆಡೆ ಶಾಖೆಗಳೂ ಇವೆ. 2011ರಿಂದ 2022ರವರೆಗೆ ನಡೆದಿದೆ ಎನ್ನಲಾದ ಸುಮಾರು 100 ಕೋಟಿ ಅಕ್ರಮದ ಬಗ್ಗೆ ಕೆಲ ಠೇವಣಿದಾರರು ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದ್ದು, ಸದ್ಯ ಐವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಈ ಪ್ರಕರಣವು ಬಹುಕೋಟಿ ಹಗರಣವನ್ನು ಒಳಗೊಂಡಿರುವುದರಿಂದ, ಶೀಘ್ರದಲ್ಲೇ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ, ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com