4 ವರ್ಷಗಳ ನಂತರವೂ ಕೊಡಗನ್ನು ಬಿಟ್ಟೂ ಬಿಡದೆ ಕಾಡುತ್ತಿದೆ ಭೂ ಕುಸಿತ ಭೂತ!!

2018ರಲ್ಲಿ ಮಡಿಕೇರಿಯಲ್ಲಿ ಸಂಭವಿಸಿದ್ದ ಭೂಕುಸಿತ ದುರಂತ 4 ವರ್ಷಗಳ ಬಳಿಕವೂ ಸ್ಥಳೀಯರನ್ನು ಇನ್ನೂ ಕಾಡುತ್ತಿದ್ದು, ಇಂದಿಗೂ ಭೂಕುಸಿತ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.
ಕೊಡಗು ಭೂಕುಸಿತ
ಕೊಡಗು ಭೂಕುಸಿತ

ಮಡಿಕೇರಿ: 2018ರಲ್ಲಿ ಮಡಿಕೇರಿಯಲ್ಲಿ ಸಂಭವಿಸಿದ್ದ ಭೂಕುಸಿತ ದುರಂತ 4 ವರ್ಷಗಳ ಬಳಿಕವೂ ಸ್ಥಳೀಯರನ್ನು ಇನ್ನೂ ಕಾಡುತ್ತಿದ್ದು, ಇಂದಿಗೂ ಭೂಕುಸಿತ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

2018ರಲ್ಲಿ ಮಡಿಕೇರಿ ತಾಲೂಕಿನ ತಂತಿಪಾಲದಲ್ಲಿ ಭೂಕುಸಿತದಲ್ಲಿ ಸವಿತಾ ಅವರ 10 ಎಕರೆ ಜಮೀನು ಕೊಚ್ಚಿ ಹೋಗಿತ್ತು. ದುರಂತ ಘಟನೆಯಿಂದ ನಾಲ್ಕು ವರ್ಷಗಳ ನಂತರ, ಏನೂ ಬದಲಾಗಿಲ್ಲ ಮತ್ತು ಇಂದಿಗೂ ಈ ಭೂಮಿ ಯಾವಾಗ ಕುಸಿಯುತ್ತದೆಯೋ ಎಂಬ ಭೀತಿ ಸ್ಥಳೀಯರನ್ನು ಕಾಡುತ್ತಿದೆ.

ಆ ವರ್ಷದ ಆಗಸ್ಟ್‌ನಲ್ಲಿ ಎಡೆಬಿಡದೆ ಸುರಿದ ಮಳೆಯ ಸಮಯದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ತಂತಿಪಾಲ ಮತ್ತು ಮಕ್ಕಂದೂರಿನಲ್ಲಿ ಎಕರೆಗಟ್ಟಲೆ ಭೂಮಿ ಸಡಿಲಗೊಂಡು ಕೊಚ್ಚಿಹೋಗಿತ್ತು. ಅನೇಕ ಬೆಳೆಗಾರರ ​​ಜೀವನೋಪಾಯಕ್ಕೆ ಇದು ಗಂಭೀರ ಹೊಡತ ನೀಡಿತ್ತು.  ಇದೀಗ ಇದೇ ಪ್ರದೇಶದಲ್ಲಿ ಮತ್ತೆ ಭೂಕುಸಿತ ಸಂಭವಿಸಬಹುದು ಎಂದು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

“ಹಾರಂಗಿ ಜಲಾಶಯದಲ್ಲಿ ನೀರಿನ ಅಸಮರ್ಪಕ ನಿರ್ವಹಣೆ 2018 ರಲ್ಲಿ ತಂತಿಪಾಲ, ಮಕ್ಕಂದೂರು ಮತ್ತು ಹಟ್ಟಿಹೊಳೆ ಭಾಗದಲ್ಲಿ ಸಂಭವಿಸಿದ ಅನಾಹುತಕ್ಕೆ ಕಾರಣವಾಗಿತ್ತು. ಬೆಳೆಗಾರರು ತಮ್ಮದಲ್ಲದ ತಪ್ಪಿಗೆ ತಮ್ಮ ಭೂಮಿಯನ್ನು ಕಳೆದುಕೊಂಡರು. ಕನಿಷ್ಠ ಪರಿಹಾರವನ್ನು ನೀಡಲಾಗಿದ್ದರೂ, ಮತ್ತೆ ಕುಸಿತ ಆತಂಕ ಸೃಷ್ಟಿಮಾಡಿರುವ ದುರ್ಬಲ ಭೂಮಿಯನ್ನು ರಕ್ಷಿಸಲು ಯಾವುದೇ ಕ್ರಮಗಳನ್ನು ಇಲ್ಲಿಯವರೆಗೆ ತೆಗೆದುಕೊಂಡಿಲ್ಲ. ಪ್ರದೇಶದಾದ್ಯಂತ ಭೂಕುಸಿತದಿಂದ ಅವಶೇಷಗಳನ್ನು ತೆರವುಗೊಳಿಸಲಾಗಿಲ್ಲ ಮತ್ತು ಎಕರೆಗಟ್ಟಲೆ ಜಮೀನು ವಾಸಯೋಗ್ಯವಾಗಿಲ್ಲ ಎಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ (ಸಿಪಿಎ) ಉಪಾಧ್ಯಕ್ಷರಾದ ಬೆಳ್ಳಿಯಪ್ಪ ಹೇಳಿದರು.

"ನಾನು ಹಾನಿಗೊಳಗಾದ ನನ್ನ ಮನೆಗೆ ಪರಿಹಾರವನ್ನು ಪಡೆದುಕೊಂಡಿದ್ದೇನೆ. ಆದರೆ 15 ಎಕರೆ ಜಮೀನಿನಲ್ಲಿ 10 ಎಕರೆ ಜಮೀನು ನಾಶವಾಗಿದ್ದು, ಪರಿಹಾರ ಬಿಡುಗಡೆಯಾಗಿಲ್ಲ. ದುರ್ಬಲ ಪ್ರದೇಶದಲ್ಲಿರುವ ಮನೆಯಲ್ಲಿ ನಾನು ಉಳಿದುಕೊಂಡರೆ ನನಗೆ ನೋಟಿಸ್ ನೀಡಲಾಗುತ್ತದೆ. ಆದರೆ, ದುರಂತದಲ್ಲಿ ಬದುಕುಳಿದಿರುವ ಐದು ಎಕರೆಯಲ್ಲಿ ಇನ್ನೂ ಸಂಪಾದಿಸಬೇಕಾಗಿದ್ದು, ಎಸ್ಟೇಟ್ ಕೆಲಸದ ವೇಳೆ ಹಳೆ ಮನೆಯಲ್ಲೇ ಉಳಿದುಕೊಂಡಿದ್ದೇನೆ’ ಎನ್ನುತ್ತಾರೆ ಸವಿತಾ.

ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ​​​​ಮತ್ತು ಸಿಪಿಎ ಸದಸ್ಯರು ಈ ಪ್ರದೇಶದ ಸಂತ್ರಸ್ತ ಬೆಳೆಗಾರರ ​​ಬೆಂಬಲಕ್ಕೆ ನಿಂತಿದ್ದು, ದುರ್ಬಲ ಭೂಮಿಯನ್ನು ಸಂರಕ್ಷಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸ್ಥಳವನ್ನು ಮತ್ತೆ ವಾಸಯೋಗ್ಯವಾಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಭೂಕುಸಿತಕ್ಕೆ ಕಾರಣವಾದ ಹಾರಂಗಿ ಜಲಾಶಯದ ನೀರಿನ ದುರ್ಬಳಕೆಯ ವಿರುದ್ಧ ನಂದಾ ಬೆಳ್ಳಿಯಪ್ಪ ಸೇರಿದಂತೆ ಸಿಪಿಎ ಸದಸ್ಯರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ನಾಲ್ಕು ವರ್ಷ ಕಳೆದರೂ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಪ್ರದೇಶದಲ್ಲಿನ ದುರ್ಬಲ ಭೂಮಿಯನ್ನು ಸಂರಕ್ಷಿಸುವ ಅವಶ್ಯಕತೆಯಿದೆ ಮತ್ತು ಭೂಕುಸಿತವನ್ನು ಪ್ರಚೋದಿಸುವ ಪ್ರದೇಶದಲ್ಲಿ ಪ್ರವಾಹವನ್ನು ತಡೆಗಟ್ಟಲು ಒಡ್ಡುಗಳನ್ನು ಸ್ಥಾಪಿಸಬೇಕು. ದುರಂತದ ಪ್ರದೇಶವನ್ನು ತೆರವುಗೊಳಿಸುವ ಅಗತ್ಯವಿದ್ದು, ದುರಂತದಲ್ಲಿ ಜೀವನೋಪಾಯವನ್ನು ಕಳೆದುಕೊಂಡಿರುವ ಸಣ್ಣ ಬೆಳೆಗಾರರಿಗೆ ಇದರಿಂದ ಸಹಾಯವಾಗುತ್ತದೆ' ಎಂದು ನಂದಾ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com