
ಬಂಧನಕ್ಕೊಳಗಾದ ಇಬ್ಬರ ಪೈಕಿ ಓರ್ವ ಆರೋಪಿ.
ಹೊನ್ನಾವರ (ಉತ್ತರ ಕನ್ನಡ): ಆಸ್ತಿ ವಿಚಾರಕ್ಕೆ ವೈಮನಸ್ಸು ಎದುರಾಗಿ ತಮ್ಮಂದಿರೇ ಅಣ್ಣನ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಹೊನ್ನಾವರ ತಾಲೂಕಿನ ತೊಟ್ಟಿಲಗುಂಡಿ ಗ್ರಾಮದಲ್ಲಿ ನಡೆದಿದೆ.
ಹನುಮಂತ್ ನಾಯ್ಕ್ ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ವಿನಾಯಕ್ ಮತ್ತು ಚಿದಂಬರ್ ಹತ್ಯೆ ಮಾಡಿದ ಆರೋಪಿಗಳಾಗಿದ್ದಾರೆ.
ಜಮೀನಿನಿಂದ ಅಡಿಕೆ ತೆಗೆದುಕೊಂಡು ಹೋಗದಂತೆ ಹನುಮಂತ್ ನಾಯ್ಕ್ ಅವರು ಸಹೋದರರಿಗೆ ತಿಳಿಸಿದ್ದು, ಇದು ಮೂವರ ನಡುವೆ ಜಗಳಕ್ಕೆ ಕಾರಣವಾಗಿದೆ. ಮೊದಲಿಗೆ ಮಾತಿನಿಂದ ಆರಂಭವಾದ ಜಗಳ ನಂತರ ಕೈ-ಕೈ ಮಿಲಾಯಿಸುವತ್ತ ಸಾಗಿದೆ. ಬಳಿಕ ವಿನಾಯಕ್ ಹಾಗೂ ಚಿದಂಬರ್ ಇಬ್ಬರು ಹನುಮತ್ ನಾಯಕ್ ಅವರ ಕತ್ತು ಕೊಯ್ದಿದ್ದಾರೆ. ಘಟನೆಯಲ್ಲಿ ಹನುಮಂತ್ ಅವರ ಮತ್ತೊಬ್ಬ ಸಹೋದರ ಮಾರುತಿ ನಾಯ್ಕ್ ಕೂಡ ಗಾಯಗೊಂಡಿದ್ದಾರೆ.
ಜಗಳವನ್ನು ನೋಡುತ್ತಿದ್ದ ಹನುಮಂತ್ ನಾಯ್ಕ್ ಅವರ ಪುತ್ರಿ ಘಟನೆಯ ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಪುರಾವೆಯಾಗಿ ಪೊಲೀಸರಿಗೆ ನೀಡಿದ್ದಾಳೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರೂ ಆರೋಪಿಗಳು ಶನಿವಾರ ಪೊಲೀಸರ ಬಳಿ ಶರಣಾಗಿದ್ದಾರೆ.
ಇದನ್ನೂ ಓದಿ: 4 ತಿಂಗಳ ಹಿಂದೆ ಕಳ್ಳತನ: ಗುರುತು ಪತ್ತೆ ಮಾಡಿ ಬಸ್ ಕಂಡಕ್ಟರ್ ನೀಡಿದ ಮಾಹಿತಿಯಿಂದ ಕುಖ್ಯಾತ ಕಳ್ಳರ ಸೆರೆ
ಘಟನೆ ಬಗ್ಗೆ ಮಾಹಿತಿ ನೀಡಿರುವ ಹೊನ್ನಾವರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ್ ಅವರು, ಕುಟುಂಬದೊಂದಿಗೆ ಹಿರಿಯ ಸಹೋದರರು ವಾಸವಿರಲಿಲ್ಲ. ಕಿರಿಯ ಸಹೋದರರು ತಂದೆ ಜೊತೆಗೆ ಸೇರಿಕೊಂಡು ತಮ್ಮ ಜಮೀನನ್ನು ಅಡಿಕೆ ತೋಟವಾಗಿ ಅಭಿವೃದ್ಧಿಪಡಿಸಿದ್ದರು. ಜಮೀನಿನಲ್ಲಿ ಕಾಳು ಮೆಣಸನ್ನು ಕೂಡ ಬೆಳೆಸಿದ್ದರು. ತಂದೆಯ ಮರಣದ ಬಳಿಕ ಅಣ್ಣಂದಿರು ಆಸ್ತಿಯಲ್ಲಿ ತಮ್ಮ ಪಾಲಿನ ಹಕ್ಕು ಪಡೆದುಕೊಂಡಿದ್ದರು. ಆದರೆ, ಕಿರಿಯ ಸಹೋದರರು ಆಸ್ತಿಯಲ್ಲಿ ಪಾಲು ಬೇಡವೆಂದು ಹೇಳಿದ್ದರು. ಆದರೆ, ಸಂಬಂಧಿಕರ ಮಧ್ಯಪ್ರವೇಶದ ನಂತರ ಒಪ್ಪಿಕೊಂಡಿದ್ದರು. ಆಸ್ತಿಯನ್ನು ನಾಲ್ವರು ಸಹೋದರರು ಹಾಗೂ ತಾಯಿಗಾಗಿ ಎಂದು ಐದು ಪಾಲು ಮಾಡಲಾಗಿತ್ತು. ಆದರೆ, ಹಿರಿಯ ಸಹೋದರರು ಹೆಚ್ಚಿನ ಆಸ್ತಿ ಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಇದು ಕೊಲೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.