ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ್ದ 3 ವಿದ್ಯಾರ್ಥಿಗಳು ಸಸ್ಪೆಂಡ್, ಷರತ್ತು ಬದ್ದ ಜಾಮೀನಿನ ಮೇಲೆ ಬಿಡುಗಡೆ!

ಪಾಕಿಸ್ತಾನದ ಪರ ಘೋಷಣೆ ಕೂಗಿ ಬಂಧನ ಭೀತಿ ಎದುರಿಸುತ್ತಿರುವ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದ್ದು, ಪ್ರಕರಣ ಸಂಬಂಧ ಪೊಲೀಸರು ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಮಾರತ್ ಹಳ್ಳಿ ಪೊಲೀಸ್ ಠಾಣೆ
ಮಾರತ್ ಹಳ್ಳಿ ಪೊಲೀಸ್ ಠಾಣೆ

ಬೆಂಗಳೂರು: ಪಾಕಿಸ್ತಾನದ ಪರ ಘೋಷಣೆ ಕೂಗಿ ಬಂಧನ ಭೀತಿ ಎದುರಿಸುತ್ತಿರುವ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದ್ದು, ಪ್ರಕರಣ ಸಂಬಂಧ ಪೊಲೀಸರು ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ನ್ಯೂ ಹಾರಿಜಾನ್ ಖಾಸಗಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ಓರ್ವ ಯುವಕ ಹಾಗೂ ಯುವತಿ ಈ ರೀತಿ ಕೂಗಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕ ಹಾಗೂ ಯುವತಿಯನ್ನು ವಶಕ್ಕೆ (Detained) ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾವು ತಮಾಷೆಗಾಗಿ ಈ ರೀತಿ ಮಾಡಿರುವುದಾಗಿ ಮಾರತ್ ಹಳ್ಳಿ ಪೊಲೀಸರ ಮುಂದೆ ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ. 

ವಿದ್ಯಾರ್ಥಿಗಳಿಗೆ ಎಚ್ಚರಿಕೆ, ಸ್ಟೇಷನ್ ಬೇಲ್ ಮೇಲೆ ಬಿಡುಗಡೆ
ಸದ್ಯ ಪೊಲೀಸರು ಯುವಕ ಮತ್ತು ಯುವತಿಯ ಕಾಲೇಜ್ ಐಡಿ ಮತ್ತು ಆಧಾರ್ ಕಾರ್ಡ್​ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಕ್ಷಮೆ ಕೇಳಿ, ತಮಾಷೆ ಎಂದು ಹೇಳಿಕೆ ನೀಡಿದ್ರೂ ಇವರೆಲ್ಲ ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಸ್ಟೇಷನ್ ಬೇಲ್ ಆಧಾರದ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಾರತ್​ಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದು, ಕಾಲೇಜು ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ದಾವಣೆಗೆರೆ ಮೂಲದ ರಿಯಾ (18), ಪಂಜಾಬ್ ಮೂಲದ ಆರ್ಯನ್ (18) ಮತ್ತು ಆಂಧ್ರ ಮೂಲದ 17 ವರ್ಷದ ವಿದ್ಯಾರ್ಥಿ ದಿನಕರ್ ವಿರುದ್ಧ ಐಪಿಸಿ 153, 505(1)B ಅಡಿಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ. ಮೂವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ. 

ಘೋಷಣೆ ಕೂಗುತ್ತಲೇ ಸಹಪಾಠಿಗಳಿಂದ ಥಳಿತ ಪ್ರಯತ್ನ, ತಮಾಷೆಗಾಗಿ ಎಂದು ಕ್ಷಮೆ ಕೇಳಿದ ಆರೋಪಿಗಳು!
ಮೂವರು ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಂತೆ ಸ್ಥಳದಲ್ಲಿದ್ದ ಇತರರು ವಿದ್ಯಾರ್ಥಿಗಳನ್ನು ಥಳಿಸಲು ಮುಂದಾಗಿದ್ದಾರೆ. ಕೂಡಲೇ ಎಚ್ಚೆತ್ತ ಮೂವರು ಕ್ಷಮೆ ಕೇಳಿದ್ದಾರೆ. ಪಾಕ್​ ಪರ ಘೋಷಣೆ ಕೂಗಿರುವ ಮೂವರು ಫಸ್ಟ್ ಇಯರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿಯೇ ಐಪಿಎಲ್​ ತಂಡಗಳ ಪರವಾಗಿಯೂ ಘೋಷಣೆ ಕೂಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ವೈರಲ್ ಆಗುತ್ತಲೇ ವಿದ್ಯಾರ್ಥಿಗಳ ಅಮಾನತು
ಇನ್ನು ಮೂವರು ಪಾಕ್​ ಪರ ಘೋಷಣೆ ಕೂಗುವ ವಿಡಿಯೋವನ್ನು ಇತರ ವಿದ್ಯಾರ್ಥಿಗಳು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಂತೆಯೇ ವಿಡಿಯೋ ವೈರಲ್ ಆಗುತ್ತಲೇ ಕಾಲೇಜು ಆಡಳಿತ ಮಂಡಳಿ ಮೂವರೂ ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ. ಅಲ್ಲದೆ ಘಟನೆ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ದೂರು ಸಹ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com