ಬಿಬಿಎಂಪಿ, ಬಿಡಿಎ ಆಸ್ತಿಗಳು ಜನರ ಸೇವೆಗೆ ಬಳಕೆಯಾಗಬೇಕು- ಸಿಎಂ ಬೊಮ್ಮಾಯಿ
ಬಿಬಿಎಂಪಿ ಹಾಗೂ ಬಿಡಿಎ ಆಸ್ತಿಗಳು ಜನರ ಸೇವೆಗೆ ಬಳಕೆಯಾಗಬೇಕು. ಸರ್ಕಾರದ ಆಸ್ತಿಗಳಾದ ವಾಣಿಜ್ಯ ಸಂಕೀರ್ಣಗಳು ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಿರಿಸದೇ, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕರ ಸೇವೆಗೆ ಮೀಸಲಿಡುವುದು ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Published: 21st November 2022 07:34 PM | Last Updated: 21st November 2022 07:38 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಬಿಬಿಎಂಪಿ ಹಾಗೂ ಬಿಡಿಎ ಆಸ್ತಿಗಳು ಜನರ ಸೇವೆಗೆ ಬಳಕೆಯಾಗಬೇಕು. ಸರ್ಕಾರದ ಆಸ್ತಿಗಳಾದ ವಾಣಿಜ್ಯ ಸಂಕೀರ್ಣಗಳು ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಿರಿಸದೇ, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕರ ಸೇವೆಗೆ ಮೀಸಲಿಡುವುದು ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್ ಐಡಿಎಲ್ ವತಿಯಿಂದ ನಿರ್ಮಾಣವಾಗುತ್ತಿರುವ ವಾಣಿಜ್ಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರು ನಾಲ್ಕೂ ದಿಕ್ಕುಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ, ಇಂಜಿನಿಯರ್ಸ್, ಜಂಟಿಆಯುಕ್ತರನ್ನೂ ನೇಮಿಸಲಾಗುತ್ತಿದೆ. ಆದರೆ ಈ ಅಧಿಕಾರಿಗಳಿಗೆ ಸ್ಥಳದ ಅಭಾವದಿಂದ ಮುಖ್ಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ರಾಜ್ಯದ ಹಲವೆಡೆ ವಾಣಿಜ್ಯ ಸಂಕೀರ್ಣ ಮಾದರಿಯಲ್ಲಿ ವಾಣಿಜ್ಯ ಚಟುವಟಿಕೆ ಹಾಗೂ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಬಹುದಾದ ಕಟ್ಟಡಗಳ ನಿರ್ಮಾಣಕ್ಕೆ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ. ಪ್ರತಿ ದಿನ 5,000 ಕ್ಕಿಂತ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತವೆ. ನಗರದಲ್ಲಿ 1.30 ಕೋಟಿ ಜನಸಂಖ್ಯೆಯಿದ್ದು, 1.56 ಕೋಟಿ ವಾಹನ ಸಂಖ್ಯೆಯಿದೆ. ಈ ಜನದಟ್ಟಣೆ ಸವಾಲನ್ನು ಎದುರಿಸಲು ಹತ್ತು ಹಲವಾರು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. 12 ಹೈ ಡೆನ್ಸಿಟಿ ರಸ್ತೆ ನಿರ್ಮಾಣಕ್ಕೆ 280 ಕೋಟಿ ರೂ.ಗಳಿಗೆ ಮಂಜೂರಾತಿ ನೀಡಲಾಗಿದೆ. ಇವುಗಳು ದೇಶದ ವಿವಿಧ ಪ್ರಮುಖ ನಗರಗಳನ್ನು ಬೆಂಗಳೂರಿಗೆ ಸಂಪರ್ಕಿಸುವ ರಸ್ತೆಗಳಾಗಿವೆ. ನಗರೋತ್ಥಾನ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಸುಮಾರು 8000 ಕೋಟಿ ರೂ.ಗಳನ್ನು ವಿವಿಧ ಯೋಜನೆಗಳಡಿ ನೀಡಲಾಗಿದೆ ಎಂದು ಅವರು ತಿಳಿಸಿದರು.
"ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ಜನದಟ್ಟಣೆ ಬೆಂಗಳೂರಿನ ಸಮಸ್ಯೆಗಳಲ್ಲಿ ಪ್ರಮುಖವಾದುದು. ದೇಶದಾದ್ಯಂತ ವಲಸಿಗರ ಮೊದಲ ಆಯ್ಕೆ ಬೆಂಗಳೂರು. ಈ ಅಪಾರ ಜನದಟ್ಟಣೆ, ಬೆಂಗಳೂರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರಿಯುತ್ತಿರವುದರ ಚಿಹ್ನೆ.
— CM of Karnataka (@CMofKarnataka) November 21, 2022
1/2 pic.twitter.com/GquMhTP06b
ನಗರದಲ್ಲಿ ವಾಹನ ದಟ್ಟಣೆಯ ನಿರ್ವಹಣೆಗಾಗಿ ವಿಶೇಷ ಆಯುಕ್ತರನ್ನು ನೇಮಿಸಲಾಗಿದೆ. ವಿಶೇಷ ಸಾರಿಗೆ ಆಯುಕ್ತರ ಕಚೇರಿಯನ್ನು ಹಾಗೂ ನೂತನ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು. ಹೆಚ್ಚಿನ ವಾಹನ ಸಂದಣಿಯಿರುವ ಪ್ರದೇಶಗಳಿಗೆ ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ನಿರ್ಮಾಣಕ್ಕೆ ಅನುಮೋದನೆ ಪಡೆಯಲು ಬೆಂಗಳೂರಿನ ನಗರ ಆಯುಕ್ತರಿಗೆ ಸೂಚಿಸಲಾಗಿದೆ. ನಗರದಲ್ಲಿ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಮೂಲಸೌಕರ್ಯವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ನಿರ್ಭಯಾ ಯೋಜನೆಯಡಿ ನಗರದಾದ್ಯಂತ 7,500 ಇಂಟೆಲಿಜೆನ್ಸ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ರಾಜಾ ಕಾಲುವೆ ಹಾಗೂ ಉಪಕಾಲುವೆಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದಕ್ಕೆ ಬೇಕಾದ ಅನುದಾನವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.