ಮಂಗಳೂರು ಸ್ಫೋಟ ಪ್ರಕರಣ: ರಾಜ್ಯದ ಮೇಲೆ ಶಾರೀಕ್ ಕೆಂಗಣ್ಣು, ತನ್ನೊಂದಿಗೆ ಮತ್ತಷ್ಟು ಸಹಚರರನ್ನು ಹೊಂದಿದ್ದನೆಯೇ?
ಬೆಂಗಳೂರು: ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಸ್ಫೋಟದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಪ್ರಕರಣ ಸಂಬಂಧ ಸಾಕಷ್ಟು ಪ್ರಶ್ನೆ ಹಾಗೂ ಅನುಮಾನಗಳು ಮೂಡತೊಡಗಿದ್ದು, ಇವುಗಳಿಗೆ ಉತ್ತರ ಪಡೆದುಕೊಳ್ಳಲು ಪ್ರಕರಣದ ಪ್ರಮುಖ ಶಂಕಿತ ಆರೋಪಿ ಮೊಹಮ್ಮದ್ ಶಾರಿಕ್ ಚೇತರಿಸಿಕೊಳ್ಳಲು ಕಾಯುತ್ತಿದ್ದಾರೆ.
ಆಟೋರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡ ಪರಿಣಾಮ ಶಾರಿಕ್ ಹಾಗೂ ಚಾಲಕ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದಾರೆ.ಶಾರಿಕ್ ನೆಲೆಸಿದ್ದ ಮೈಸೂರಿನ ಬಾಡಿಗೆ ಮನೆಯಲ್ಲಿ ಪೊಲೀಸರು ಸಾಕಷ್ಟು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ನಡುವೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ಫೋಟ ನಡೆಸಲು ಶಾರಿಕ್ ಮಂಗಳೂರಿಗೆ ಏಕೆ ತೆರಳಿದ್ದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವನ ಗುರಿ ಯಾರು? ಅವನು ಒಬ್ಬನೇ ಇದ್ದಾನೆಯೇ ಅಥವಾ ಇತರೆ ಸಹಚರರು ಇದ್ದಾರೆಯೇ? ಇದ್ದರೆ, ಯಾರವರು? ಶಾರೀಕ್ ಪಡೀಲ್‌ನಲ್ಲಿ ಏಕೆ ಇಳಿದನು? ಅವನು ಯಾರ ಸೂಚನೆಗಳನ್ನು ಅನುಸರಿಸುತ್ತಿದ್ದ? ಎಂಬ ಪ್ರಶ್ನೆಗಳು ಪೊಲೀಸರಲ್ಲಿ ಮೂಡತೊಡಗಿದೆ.
ಶಾರಿಕ್ ಮೈಸೂರಿನಿಂದ ಮಂಗಳೂರಿಗೆ ಪ್ರಯಾಣಿಸಿದ್ದು, ಮಂಗಳೂರು ನಗರದಿಂದ 9 ಕಿಮೀ ದೂರದಲ್ಲಿರುವ ಪಡೀಲ್‌ನಲ್ಲಿ ಇಳಿದಿರುವುದು. ನಂತರ ಆಟೋರಿಕ್ಷಾದಲ್ಲಿ ತನ್ನ ಪ್ರಯಾಣ ಮುಂದುವರೆಸಿರುವುದು ಈ ವರೆಗಿನ ತನಿಖೆಯಿಂದ ತಿಳಿದುಬಂದಿದೆ.
ಬಲ್ಲ ಮೂಲಗಳ ಪ್ರಕಾರ ಶಾರಿಕ್ ಅವರ ಹುಟ್ಟೂರಾದ ಶಿವಮೊಗ್ಗದ ತೀರ್ಥಹಳ್ಳಿಯ ಇಬ್ಬರು ಯುವಕರ ಮೇಲೆ ಶಂಕೆ ವ್ಯಕ್ತವಾಗಿದ್ದು, ಅವರೇ ಶಾರೀಕ್ ಸಹಚರರಿರಬಹುದು. ಅವರಿಗೆ ಭಯೋತ್ಪಾದನೆಯ ಸಂಚಿನ ಬಗ್ಗೆ ತಿಳಿದಿರಬಹುದು ಎಂದು ಅನುಮಾನಗಳು ಮೂಡತೊಡಗಿವೆ.
ಈ ನಡುವೆ ಶಾರೀಕ್'ಗೆ ಐಸಿಯುವಿನಲ್ಲಿಯೇ ಚಿಕಿತ್ಸೆ ಮುಂದುವರೆದಿದ್ದು, ಹೇಳಿಕೆ ನೀಡುವ ಸ್ಥಿತಿಯಲ್ಲಿ ಆತನಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ