ಬೆಂಗಳೂರು: ಮಾರ್ಚ್ ಮಧ್ಯಂತರದಲ್ಲಿ ವೈಟ್‌ಫೀಲ್ಡ್- ಕೆಆರ್ ಪುರಂ ಮೆಟ್ರೋ ಮಾರ್ಗ ಸಂಚಾರ ಆರಂಭ

ಬೆಂಗಳೂರಿನ ಬಹು ನಿರೀಕ್ಷಿತ ವೈಟ್‌ಫೀಲ್ಡ್ ನಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿಯನ್ನು 2 ಹಂತಗಳಲ್ಲಿ ನಡೆಯುತ್ತಿದ್ದು, ಈ ಪೈಕಿ ವೈಟ್‌ಫೀಲ್ಡ್-ಕೆಆರ್ ಪುರಂ ನಡುವಿನ ಮಾರ್ಗದ ಸಂಚಾರ 2023ರ ಮಾರ್ಚ್‌ ವೇಳೆಗೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ವೈಟ್‌ಫೀಲ್ಡ್ ಮತ್ತು ಗರುಡಾಚಾರ್ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವಿನ ಹಳಿಗಳ ಉದ್ದಕ್ಕೂ ಪರೀಕ್ಷೆ ನಡೆಸುತ್ತಿರುವುದು.
ವೈಟ್‌ಫೀಲ್ಡ್ ಮತ್ತು ಗರುಡಾಚಾರ್ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವಿನ ಹಳಿಗಳ ಉದ್ದಕ್ಕೂ ಪರೀಕ್ಷೆ ನಡೆಸುತ್ತಿರುವುದು.

ಬೆಂಗಳೂರು: ಬೆಂಗಳೂರಿನ ಬಹು ನಿರೀಕ್ಷಿತ ವೈಟ್‌ಫೀಲ್ಡ್ ನಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿಯನ್ನು 2 ಹಂತಗಳಲ್ಲಿ ನಡೆಯುತ್ತಿದ್ದು, ಈ ಪೈಕಿ ವೈಟ್‌ಫೀಲ್ಡ್-ಕೆಆರ್ ಪುರಂ ನಡುವಿನ ಮಾರ್ಗದ ಸಂಚಾರ 2023ರ ಮಾರ್ಚ್‌ ವೇಳೆಗೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಮೆಟ್ರೋ ಮಾರ್ಗದ ಮೊದಲ ವಿಸ್ತರಣೆಯಾದ ವೈಟ್‌ಫೀಲ್ಡ್ ಮತ್ತು ಬೈಯಪ್ಪನಹಳ್ಳಿ ಮಧ್ಯದಲ್ಲಿ ಕಾಮಗಾರಿ ಭರದಿಂದ ಸಾಗಿದೆ. ಈ ವಿಸ್ತಣೆಯಲ್ಲಿನ 13ಕಿಲೋ ಮೀಟರ್‌ ಮಾರ್ಗವಾದ ವೈಟ್‌ಫೀಲ್ಡ್ -ಕೆಆರ್ ಪುರಂವರೆಗಿನ ಕೆಲಸ ಮುಂದಿನ ವರ್ಷ ಮಧ್ಯಂತರಕ್ಕೆ ಮುಗಿದು ಬಳಕೆಗೆ ಲಭ್ಯವಾಗಲಿದೆ.

ಸದ್ಯ ವೈಟ್‌ಫೀಲ್ಡ್ ಮತ್ತು ಗರುಡಾಚಾರ್ ಪಾಳ್ಯ ಮಧ್ಯದಲ್ಲಿ ಪೂರ್ಣಗೊಂಡ ಮೆಟ್ರೋ ಮಾರ್ಗ ಪರೀಕ್ಷೆ ಮತ್ತು ಕಾರ್ಯಾರಂಭ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲು ವೈಟ್‌ಫಿಲ್ಡ್‌ನಿಂದ ಗರುಡಾಚಾರ್ ಪಾಳ್ಯವರೆಗೆ ಮಾತ್ರ ಎಂದು ಹೇಳಲಾಗಿತ್ತು. ಅದನ್ನು ವೈಟ್‌ಫೀಲ್ಡ್ ಮತ್ತು ಗರುಡಾಚಾರ್ ಪಾಳ್ಯದ ನಡುವಿನ ಮಾರ್ಗದ ಪರೀಕ್ಷೆ ಹಾಗೂ ರೈಲು ಕಾರ್ಯಾಚರಣೆಯನ್ನು ಕೆಆರ್ ಪುರಂ ವರೆಗೆ ವಿಸ್ತರಿಸಲು ನಿರ್ಧರಿಸಿದ್ದೇವೆ. 2023ರ ಮಾರ್ಚ್ ವೇಳೆಗೆ ವೈಟ್‌ಫೀಲ್ಡ್‌- ಕೆಆರ್ ಪುರಂಗೆ ರೈಲುಗಳು ಸಂಚರಿಸಲಿವೆ. ಇದರ ಪೂರ್ವಭಾವಿಯಾಗಿ ಫೆಬ್ರುವರಿ ತಿಂಗಳಲ್ಲಿ ಮೆಟ್ರೋ ರೈಲು ಸುರಕ್ಷತೆ ಕುರಿತು ಸಂಸ್ಥೆ ಆಯುಕ್ತರು, ಅಧಿಕಾರಿಗಳಿಂದ ತಪಾಸಣೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ವೈಟ್‌ಫೀಲ್ಡ್‌-ಕೆಆರ್ ಪುರಂಗೆ 13 ಕಿ.ಮೀ ವ್ಯಾಪ್ತಿಯಲ್ಲಿ ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸದರಮಂಗಲ, ನಲ್ಲೂರಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ ಪಾಳ್ಯ, ಸರಸ್ವತಿ ನಗರ ಮತ್ತು ಕೆಆರ್ ಪುರಂ ಎಂದು 12 ಮೆಟ್ರೋ ನಿಲ್ದಾಣಗಳು ಬರುತ್ತವೆ ಎಂದು ಮಾಹಿತಿ ನೀಡಿದರು.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣವರೆಗೆ ಬಿಎಂಆರ್'ಸಿಎಲ್ ಬಸ್ ಸೇವೆ
ಈ ಭಾಗದ ಕೆಲಗಳು ಮುಗಿಯುವವರೆಗೆ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣವನ್ನು ತಲುಪಲು ಪ್ರಯಾಣಿಕರಿಗಾಗಿ ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಬಿಎಂಆರ್‌ಸಿಎಲ್ ಸಂಸ್ಥೆಯ ಬಸ್‌ಗಳು ಸೇವೆ ನೀಡಲಿವೆ. ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಬಾಕಿ ಉಳಿದ ಕಾಮಗಾರಿ ನಡೆಯುತ್ತಿದೆ. ರೈಲ್ವೆ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಲಾಗಿದೆ. ಈ ವಿಸ್ತರಣೆಯು ಮುಂದಿನ ವರ್ಷದ ಜೂನ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅಂಜುಮ್ ಪರ್ವೇಜ್ ತಿಳಿಸಿದರು.

ಪ್ರಯಾಣ ಗರಿಷ್ಠ ದರ ಹೆಚ್ಚಳಕ್ಕೆ ಚಿಂತನೆ
ಬಿಎಂಆರ್‌ಸಿಎಲ್ ತನ್ನ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಗರಿಷ್ಠ ಪ್ರಯಾಣದ ದರವನ್ನು ಹೆಚ್ಚಿಸುವ ಚಿಂತನೆ ನಡೆದಿದೆ. ಕಳೆದ ಐದು ವರ್ಷಗಳ ಹಿಂದೆ ಜೂನ್‌ನಲ್ಲಿ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಹೈಕೋರ್ಟ್ ನ್ಯಾಯಾಧೀಶರು, ರಾಜ್ಯ ಸರ್ಕಾರದ ಅಧಿಕಾರಿ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಸದಸ್ಯರಾಗಿ ಇರುವ ಸಮಿತಿಯು ದರ ನಿಗದಿ ಬಗ್ಗೆ ತೀರ್ಮಾನಿಸಲಿದೆ.

ಬಿಎಂಆರ್‌ಸಿಎಲ್ ಮಾಜಿ ಎಂಡಿ ಪ್ರದೀಪ್ ಸಿಂಗ್ ಖರೋಲಾ ಅವರ ನಿವೃತ್ತಿಯ ನಂತರ ಅವರ ಸ್ಥಾನಕ್ಕೆ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಇವಿ ರಮಣ ರೆಡ್ಡಿ ಅವರನ್ನು ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ.

ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ, ಯಲಚೇನಹಳ್ಳಿಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ಲೈನ್‌ಗಳಿಗೆ ವಿಸ್ತರಿಸುವ ಮೂಲಕ ನಮ್ಮ ಮೆಟ್ರೋದ ನೆಟ್‌ವರ್ಕ್ ಹಂತ -1ರಲ್ಲಿ 42.3 ಕಿ.ಮೀ.ಯಿಂದ 56.1 ಕಿ.ಮೀ.ಗೆ ಹೆಚ್ಚಾಗಿದೆ. ಆದರೆ ಗರಿಷ್ಠ ದರವು ರೂ.60 ನಷ್ಟೇ ಇದೆ. ಈ ಗರಿಷ್ಠ ದರವು ದೀರ್ಘಾವಧಿಗೆ ಲಾಭಧಾಯವಾದುದಲ್ಲ. ಮುಂದಿನ ವರ್ಷ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂಗೆ ಮತ್ತೆ ಮೆಟ್ರೋ ಲೈನ್ ವಿಸ್ತರಣೆ ಆಗುವುದರಿಂದ ಪ್ರಯಾಣದ ಗರಿಷ್ಠ ದರ ಏರಿಕೆ ಅಗತ್ಯವಾಗಿದೆ ಎಂದು ಅಂಜುಮ್ ಪರ್ವೇಜ್ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com