ಕೋಲ್ಕತ್ತ- ಬೆಂಗಳೂರು ಇಂಡಿಗೋ ವಿಮಾನಕ್ಕೆ ಮತ್ತೆ ಟಿಶ್ಶ್ಯೂ ಪೇಪರ್ ಬಾಂಬ್ ಬೆದರಿಕೆ

ಕೋಲ್ಕತ್ತಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಟಿಶ್ಶೂಪೇಪರ್ ಬಾಂಬ್ ಬೆದರಿಕೆ ಬಂದಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. 
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು: ಕೋಲ್ಕತ್ತಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಟಿಶ್ಶೂಪೇಪರ್ ಬಾಂಬ್ ಬೆದರಿಕೆ ಬಂದಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. 

ತಪಾಸಣೆ ಮಾಡಿದ ಭದ್ರತಾ ಸಂಸ್ಥೆಗಳಿಗೆ ಇದೊಂದು ಸುಳ್ಳು ಬೆದರಿಕೆ ಕರೆ ಎಂದು ತಿಳಿದುಬಂದಿದೆ. ಪ್ರಯಾಣಿಕರೊಬ್ಬರ ಸೀಟಿನ ಹಿಂಬದಿಯಲ್ಲಿ ಟಿಶ್ಶೂ ಪೇಪರ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಈ ಘಟನೆ ಸಂಬಂಧ ವಿಮಾನ ಸಂಸ್ಥೆ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
 
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ ವಿಮಾನ 6ಇ 379 ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 5.29 ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟೇಕ್ ಆಫ್ ಆಗಿತ್ತು.  ಬೆಳಿಗ್ಗೆ 8.01 ಕ್ಕೆ ವಿಮಾನ ಬೆಂಗಳೂರು ತಲುಪುತ್ತಿದ್ದಂತೆಯೇ ವಿಮಾನದ ಒಳಗೆ ಬಾಂಬ್ ಇದೆ ಎಂಬ ಬೆದರಿಕೆ ಮಾಹಿತಿ ಬಂದಿದೆ. ಖಾಲಿಯಾಗಿದ್ದ ವಿಮಾನವನ್ನು ಪ್ರತ್ಯೇಕವಾಗಿಸಿ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಯಿತು. ತಪಾಸಣೆ ನಡೆಸಿದಾಗ ಅನಾಮಧೇಯ ವ್ಯಕ್ತಿಯೋರ್ವ 6 ಡಿ ಸೀಟ್ ನಲ್ಲಿ ಬಾಂಬ್ ಎಂಬ ಅಕ್ಷರಗಳನ್ನು ನೀಲಿ ಶಾಯಿಯಲ್ಲಿ ಬರೆದಿದ್ದು ಪತ್ತೆಯಾಗಿದೆ. 

ತಕ್ಷಣವೇ ಎಲ್ಲಾ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿ, ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಯಿತು. ಸಂಪೂರ್ಣ ವಿಮಾನವನ್ನು ತಪಾಸಣೆ ಮಾಡಿದ ಬಳಿಕ ಯಾವುದೇ ಅಪಾಯವೂ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಯಿತು. 

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ಪೈಕಿಯೇ ಅನುಮಾನ ವ್ಯಕ್ತವಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com