ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಪೆಟ್ರೋಲ್ ಬಂಕ್ ಮಾಲೀಕ, ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ಮೂವರು
ಬೆಂಗಳೂರು-ರಾಮನಗರ ಮುಖ್ಯರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಆವರಣದಲ್ಲಿ ಧೂಮಪಾನ ಮಾಡುವುದನ್ನು ನಿಲ್ಲಿಸುವಂತೆ ಕೇಳಿದ್ದಕ್ಕೆ ಎಸ್‌ಯುವಿಯಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಬಂಕ್ ಮಾಲೀಕ ಹಾಗೂ ಮ್ಯಾನೇಜರ್‌ನ ಮೇಲೆ ಹಲ್ಲೆ ನಡೆಸಿದ್ದಾರೆ.
Published: 04th October 2022 12:25 PM | Last Updated: 04th October 2022 12:25 PM | A+A A-

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬೆಂಗಳೂರು-ರಾಮನಗರ ಮುಖ್ಯರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಆವರಣದಲ್ಲಿ ಧೂಮಪಾನ ಮಾಡುವುದನ್ನು ನಿಲ್ಲಿಸುವಂತೆ ಕೇಳಿದ್ದಕ್ಕೆ ಎಸ್‌ಯುವಿಯಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಬಂಕ್ ಮಾಲೀಕ ಹಾಗೂ ಮ್ಯಾನೇಜರ್‌ನ ಮೇಲೆ ಹಲ್ಲೆ ನಡೆಸಿದ್ದಾರೆ.
ಧೂಮಪಾನ ಮುಂದುವರಿಸಿದರೆ ಅವರ ವಾಹನಕ್ಕೆ ಇಂಧನ ತುಂಬಲು ಸಿಬ್ಬಂದಿ ನಿರಾಕರಿಸಿದ್ದರು. ಆದಾಗ್ಯೂ, ಮೂವರು ಅದೇ ಧೂಮಪಾನ ಮಾಡುವುದನ್ನು ಮುಂದುವರಿಸಿದರು ಮತ್ತು ಪೆಟ್ರೋಲ್ ಬಂಕ್‌ನ ಸಂಪ್ ಹತ್ತಿರವೇ ಸಿಗರೇಟನ್ನು ಎಸೆದರು ಎಂದು ತಿಳಿಸಿದ್ದಾರೆ.
ಪಂಪ್ ಮಾಲೀಕನನ್ನು ಮೋಹನ್ ಎಂದು ಗುರುತಿಸಲಾಗಿದ್ದು, ಮ್ಯಾನೇಜರ್ ಕೆಎಸ್ ಮನು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅರ್ಚಕರಹಳ್ಳಿಯಲ್ಲಿ ಪೆಟ್ರೋಲ್ ಬಂಕ್ ಇದ್ದು, ಶನಿವಾರ ಸಂಜೆ 4.45ರ ಸುಮಾರಿಗೆ ಈ ಘಟನೆ ನಡೆದಿದೆ. ಬಂಕ್‌ನ ಕಛೇರಿಯೊಳಗೆ ನುಗ್ಗಿದ ಆರೋಪಿಗಳನ್ನು ಸಿಬ್ಬಂದಿ ಮತ್ತು ಇತರೆ ವಾಹನ ಚಾಲಕರು ನಿಯಂತ್ರಿಸಬೇಕಾಯಿತು. ಮಾಲೀಕ ಪೊಲೀಸರಿಗೆ ಕರೆ ಮಾಡಲು ಯತ್ನಿಸಿದ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.
ಟಿಎನ್ಐಇಯೊಂದಿಗೆ ಮಾತನಾಡಿದ ವ್ಯವಸ್ಥಾಪಕರು, 'ಸಂಪ್ ತುಂಬುತ್ತಿತ್ತು ಮತ್ತು ಆರೋಪಿಗಳು ಪೆಟ್ರೋಲ್ ಟ್ಯಾಂಕರ್‌ಗೆ ಬಹಳ ಹತ್ತಿರದಲ್ಲಿದ್ದರು. ಸಂಪ್‌ಗೆ ಪೆಟ್ರೋಲ್ ತುಂಬುವಾಗ, ನಾವು ವಾಹನಗಳಿಗೆ ಇಂಧನ ತುಂಬುವುದನ್ನು ನಿಲ್ಲಿಸುತ್ತೇವೆ. ಈ ವೇಳೆ ಕಾಯುತ್ತಿದ್ದ ಆರೋಪಿಗಳು ಧೂಮಪಾನ ಮಾಡುತ್ತಿದ್ದರು. ಅದೃಷ್ಟವಶಾತ್ ಏನೂ ಆಗಲಿಲ್ಲ. ಒಂದು ವೇಳೆ ಏನಾದರೂ ಸಂಭವಿಸಿದ್ದರೆ, ಆರೋಪಿಗಳು ಸೇರಿದಂತೆ ಯಾರೂ ಜೀವಂತವಾಗಿರುತ್ತಿರಲಿಲ್ಲ'. ಒಂದು ವೇಳೆ ಅವಘಡ ಸಂಭವಿಸಿದಲ್ಲಿ, ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ದೊಡ್ಡ ಬೆಂಕಿ ಆವರಿಸಿಕೊಳ್ಳುತ್ತಿತ್ತು ಎಂದು ಮನು ತಿಳಿಸಿದರು.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಆರೋಪಿಗಳು ರಾಮನಗರದವರಾಗಿದ್ದು, ಬೆಂಗಳೂರು ಸೆಂಟ್ರಲ್ (ಕೋರಮಂಗಲ) ಆರ್‌ಟಿಒದಲ್ಲಿ ನೋಂದಾಯಿಸಲಾದ ಎಸ್‌ಯುವಿಯನ್ನು ಓಡಿಸುತ್ತಿದ್ದರು ಎಂದು ತಿಳಿದುಬಂದಿದೆ.
'ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಕುಡಿದಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಅವರ ಗುರುತು ಪತ್ತೆಯಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.