ಕಾರು ನಿಲ್ಲಿಸಿ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿದ ಬೈಕ್ ಸವಾರರು; ವೈಯುಕ್ತಿಕ ದ್ವೇಷ ಶಂಕೆ

ಇಬ್ಬರು ಬೈಕ್ ಸವಾರರು ಚಲಿಸುತ್ತಿದ್ದ ಕಾರನ್ನು ನಿಲ್ಲಿಸಿ ಚಾಲಕನ ಕಣ್ಣಿಗೆ ಖಾರದಪುಡಿ ಎರಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಬ್ಬರು ಬೈಕ್ ಸವಾರರು ಚಲಿಸುತ್ತಿದ್ದ ಕಾರನ್ನು ನಿಲ್ಲಿಸಿ ಚಾಲಕನ ಕಣ್ಣಿಗೆ ಖಾರದಪುಡಿ ಎರಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪ್ರಾಥಮಿಕ ಕೃಷಿ ಸಾಲ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ಜಿ.ಎಚ್.ಹನುಮಯ್ಯ (49) ಎಂಬುವರು ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ ಆವರನ್ನು ಬೈಕ್ ನಲ್ಲಿ ಹಿಂಬಾಲಿಸುತ್ತಿದ್ದ ಇಬ್ಬರು ಬೈಕ್ ಸವಾರರು ಕಾರನ್ನು ತಡೆದು ಕಿಟಕಿಯ ಗಾಜು ಇಳಿಸುವಂತೆ ಕೇಳಿದ್ದಾರೆ. ಅವರು ಗ್ಲಾಸ್ ಕೆಳಗೆ ಇಳಿಸಿದಾಗ, ದಿಢೀರನೇ ಅವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. 

 ಹನುಮಯ್ಯ ರಾಮನಗರ ರಸ್ತೆಯ ವಿ ಪುರ ನಿವಾಸಿ. ಕೆಲವು ದಾಖಲೆಗಳನ್ನು ಸಲ್ಲಿಸಲು ಸೊಸೈಟಿಯ ಅಧ್ಯಕ್ಷರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಅವರ ಮನೆಯಿಂದ 2 ಕಿಮೀ ದೂರದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಹನುಮಯ್ಯ ಕಣ್ಣಿನ ಉರಿಯಿಂದ ಕಿರುಚತೊಡಗಿದ್ದು, ಬಳಿಕ ದುಷ್ಕರ್ಮಿಗಳು ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಬಳಿಕ ಹನುಮಯ್ಯ ತನ್ನ ಕಣ್ಣುಗಳನ್ನು ನೀರಿನಿಂದ ಸ್ವಚ್ಛಗೊಳಿಸಿ, ಮಸುಕಾದ  ದೃಷ್ಟಿಯಿಂದಲೇ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಅವರ ಸ್ನೇಹಿತರು ಆವರನ್ನು ಆಸ್ಪತ್ರೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯು ವೈದ್ಯಕೀಯ-ಕಾನೂನು ಪ್ರಕರಣವನ್ನು ದಾಖಲಿಸಿ ನ್ಯಾಯವ್ಯಾಪ್ತಿಯ ಪೊಲೀಸರಿಗೆ ಮಾಹಿತಿ ನೀಡಿದೆ.

ದಾಳಿಯ ಹಿಂದೆ ಯಾರಿದ್ದಾರೆಂದು ತನಗೆ ಸಂಪೂರ್ಣವಾಗಿ ತಿಳಿದಿಲ್ಲ. ಆರೋಪಿಗಳು ದರೋಡೆಕೋರರಿರಬಹುದು ಅಥವಾ ಸಂತ್ರಸ್ತೆಯೊಂದಿಗೆ ಜಗಳವಾಡಿದ ಯಾರಾದರೂ ಕಳುಹಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಬಗ್ಗೆ ಪೊಲೀಸ್ ದೂರು ನೀಡಿರುವ ಸಂತ್ರಸ್ಥ ಹನುಮಯ್ಯ, 'ಯಾರು ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಿಲ್ಲ. ಆರೋಪಿಗಳು ಕಾರಿನ ಪಕ್ಕದಲ್ಲಿ ಬಂದು ಗಾಜು ಇಳಿಸಲು ಹೇಳಿದರು. ಅವರು ದಾರಿ ಹುಡುಕುತ್ತಿದ್ದಾರೆ ಎಂದು ಭಾವಿಸಿ ನಾನು ಕಾರಿನ ಬಾಗಿಲ ಗ್ಲಾಸ್ ಇಳಿಸಿದೆ. ಬಳಿಕ ಅವರು ನೋಡನೋಡುತ್ತಲೇ ನನ್ನ ಕಣ್ಣಿಗೆ ಮೆಣಸಿನ ಪುಡಿಯನ್ನು ಎಸೆದರು. ಒಂದು ವೇಳೆ ಅವರು ದರೋಡೆಕೋರರಾಗಿದ್ದರೆ ನಾನು ಹಾಕಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಬಹುದಿತ್ತು. ವೃತ್ತಿಪರ ಸಮಸ್ಯೆಯ ಮೇಲೆ ದಾಳಿ ನಡೆದಿರಬೇಕೆಂದು ನಾನು ಶಂಕಿಸುತ್ತೇನೆ ಎಂದು ಅವರು ಹೇಳಿದರು.

ಹನುಮಯ್ಯ ರಾಮನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹನುಮಯ್ಯ ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com