ಚಿತ್ತ ಮಳೆಗೆ ಹಲವು ಜಿಲ್ಲೆ ತತ್ತರ: ತುಮಕೂರಿನಲ್ಲಿ ಮನೆ ಕುಸಿತ, ಕೊಚ್ಚಿ ಹೋದ ಕಾರು; ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ

ರಾಜ್ಯದಲ್ಲಿ ವರುಣ ಮತ್ತೆ ಆರ್ಭಟಿಸುತ್ತಿದ್ದಾನೆ. ರಾಜ್ಯದ ಅನೇಕ ಕಡೆ ಪ್ರತಿ ದಿನ ಮಳೆಯಾಗುತ್ತಿದ್ದು ಅನೇಕ ಅವಾಂತರಗಳು ಸಹ ಸಂಭವಿಸಿವೆ. ಕಳೆದ ರಾತ್ರಿ ಬೆಂಗಳೂರಿ‌ನಲ್ಲಿ ನಿರಂತರ ಮಳೆಯಾಗಿದ್ದು ರಸ್ತೆಗಳು ಕೆರೆಯಂತಾಗಿವೆ.
ಬೆಂಗಳೂರು ಮಳೆ (ಸಂಗ್ರಹ ಚಿತ್ರ)
ಬೆಂಗಳೂರು ಮಳೆ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ವರುಣ ಮತ್ತೆ ಆರ್ಭಟಿಸುತ್ತಿದ್ದಾನೆ. ರಾಜ್ಯದ ಅನೇಕ ಕಡೆ ಪ್ರತಿ ದಿನ ಮಳೆಯಾಗುತ್ತಿದ್ದು ಅನೇಕ ಅವಾಂತರಗಳು ಸಹ ಸಂಭವಿಸಿವೆ. ಕಳೆದ ರಾತ್ರಿ ಬೆಂಗಳೂರಿ‌ನಲ್ಲಿ ನಿರಂತರ ಮಳೆಯಾಗಿದ್ದು ರಸ್ತೆಗಳು ಕೆರೆಯಂತಾಗಿವೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಅಲ್ಲದೆ ಮನೆಗಳಿಗೆ ನೀರು ನುಗ್ಗಿದ್ದು ಜನ ನಿದ್ದೆಗೆಡುವಂತಾಗಿದೆ.

ಇನ್ನು ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಇನ್ನೂ 2 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇಂದು ಕೂಡ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳು ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಚಿತ್ತ ಮಳೆಗೆ ತುಮಕೂರು ತತ್ತರಿಸಿದೆ. ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಮನೆ ಕುಸಿತ ಸೇರಿದಂತೆ ನಾನಾ ಅನಾಹುತಗಳು ಸಂಭವಿಸಿವೆ.  ಜಿಲ್ಲೆಯ ಕೊರಟಗೆರೆ ತಾಲೂಕಿನ ದಾಸಲಕುಂಟೆ ಕೆರೆ ಕೋಡಿ ನೀರಲ್ಲಿ ಕಾರು ಕೊಚ್ಚಿ ಹೋಗಿದ್ದು, ಸ್ಥಳೀಯರು ಚಾಲಕನನ್ನು ರಕ್ಷಿಸಿದ್ದಾರೆ. ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಕೋಡಿ ನೀರು ಉಕ್ಕಿ ಹರಿಯಿತು. ನೀರಿನ ರಭಸಕ್ಕೆ ತೋವಿನ ಕೆರೆ ರಸ್ತೆ ಸಂಪೂರ್ಣ ಬಂದ್‌ ಆಗಿತ್ತು. ಗುಬ್ಬಿ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಸಂದ್ರಪಾಳ್ಯದ ವಿಜಿಯಮ್ಮ ಎಂಬುವರ ಮನೆ ಧರೆಗೆ ಉರುಳಿದೆ.

ನಿನ್ನೆ ಒಂದೇ ದಿನಕ್ಕೆ ಬೆಂಗಳೂರಿನ 8 ವಲಯಗಳಲ್ಲಿ ವರುಣನ ಆರ್ಭಟ ಅತಿ ಹೆಚ್ಚಿದ್ದು, ಯಲಹಂಕ 75.5 ಮಿ.ಮೀ, ಅಟ್ಟೂರು 70 ಮಿ.ಮೀ, ಚೌಡೇಶ್ವರಿ ವಾರ್ಡ್ 67.5 ಮಿ.ಮೀ, ಆರ್.ಆರ್.ನಗರ 66.5 ಮಿ.ಮೀ, ಸಂಪಗಿರಾಮನಗರದಲ್ಲಿ 66 ಮಿ.ಮೀ ಮಳೆ ಆಗಿದೆ. ಮಳೆಯಿಂದಾಗಿ ಹೆಬ್ಬಾಳದ ಎನ್‌ಇಟಿ ಬಸ್‌ ನಿಲ್ದಾಣ, ಸಂಜಯನಗರ, ವಿಜಯನಗರ ಸೇರಿದಂತೆ ವಿವಿಧ ಕಡೆ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಅಲ್ಲದೆ, ಹಲವು ಕಡೆಗಳಲ್ಲಿ ಮರದ ರೆಂಬೆಗಳು ಬಿದ್ದಿರುವ ವರದಿಯಾಗಿದೆ.

ದಾವಣಗೆರೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ದಾವಣಗೆರೆ ತಾಲೂಕಿನ ಅಣಜಿ ಕೆರೆಗೆ ನೀರು ಹೆಚ್ಚಾದ ಹಿನ್ನೆಲೆ ರಾಜ್ಯ ಹೆದ್ದಾರಿ‌ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ. ಅಣಜಿ‌ಕೆರೆಗೆ ನೀರು ಹೆಚ್ಚಾದ ಹಿನ್ನೆಲೆ ಅಣಜಿ‌ ಮಾರ್ಗವಾಗಿ ಜಗಳೂರಿಗೆ ಹೋಗುವುದ‌ನ್ನ ನಿಷೇಧಿಸಲಾಗಿದೆ. ಬದಲಾಗಿ ಜಗಳೂರಿಗೆ ಹೋಗುವರು ಅಣಜಿ ಕ್ರಾಸ್ ನಿಂದ ಅರಸೀಕೆರೆ ಬಸವಕೋಟೆ ಮಾರ್ಗವಾಗಿ ಜಗಳೂರಿಗೆ ಅಥವಾ ರಾಷ್ಟ್ರೀಯ ಹೆದ್ದಾರಿ 48 ರ‌ ಮೂಲಕ ಭರಮಸಾಗರ ಹೋಗಿ ಜಗಳೂರಿಗೆ ಹೋಗಲು ಸೂಚನೆ ನೀಡಲಾಗಿದೆ.

ಕೆಲ ಗ್ರಾಮಗಳಲ್ಲಿ ನಿರಂತರ ಮಳೆಗೆ ಮನೆಗಳಿಗೆ ನೀರು ನುದ್ದಿದೆ. ನೀರು ಹರಿದು ಹೋಗುವ ಬಹುತೇಕ‌ ಚರಂಡಿ ಕಾಲುವೆಗಳು ಬ್ಲಾಕ್ ಆಗಿವೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಪುಣ್ಯಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾ.ಪಂಗೆ ಮುತ್ತಿಗೆ ಹಾಕಿದ್ದಾರೆ. ತಕ್ಷಣಕ್ಕೆ ಚರಂಡಿ ಹಾಗೂ ಕಾಲುವೆಗಳನ್ನ ಸರಿ ಪಡಿಸಿ ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ನಿರಂತರ ಮಳೆಗೆ 75 ವರ್ಷದ ಬಳಿಕ ದಾವಣಗೆರೆ ತಾಲೂಕಿನ ಆಲೂರು ಗ್ರಾಮದ ಪುರಾತನ ಬಾವಿ ಭರ್ತಿಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಜಾಲಹಳ್ಳಿ-ಇಡಗೂರು ಗ್ರಾಮದ ಮಧ್ಯೆ ಬೈಕ್​​ನಲ್ಲಿ ಸೇತುವೆ ದಾಟುವಾಗ ಸವಾರರು ಕೊಚ್ಚಿಹೋದ ಘಟನೆ ನಡೆದಿದೆ. ಸ್ಥಳೀಯರ ಸಹಾಯದಿಂದ ಓರ್ವನ ರಕ್ಷಣೆ ಮಾಡಲಾಗಿದ್ದು ಮತ್ತೋರ್ವ ಮೃತಪಟ್ಟಿದ್ದಾನೆ.

ಮಂಡ್ಯ ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮಕ್ಕೆ ನೀರು ನುಗ್ಗಿದ್ದು ಹಲವು ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಮಕ್ಕಳ ಪಠ್ಯ ಪುಸ್ತಕ, ದಾಖಲೆ ಪತ್ರಗಳು, ದಿನಸಿ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿವೆ. ಬೆಳಗ್ಗಿನ ಉಪಾಹಾರಕ್ಕೂ ಗ್ರಾಮಸ್ಥರು ಪರಿತಪಿಸುತ್ತಿರುವ ವಾತಾವರಣ ಸೃಷ್ಟಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com