ಹಾಸನ: ಸರಣಿ ಅಪಘಾತ, ನಾಲ್ವರು ಮಕ್ಕಳು ಸೇರಿದಂತೆ 9 ಜನರ ದುರ್ಮರಣ
ಹಾಸನ: ಸರ್ಕಾರಿ ಬಸ್, ಟೆಂಪೋ ಟ್ರಾವೆಲರ್, ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಮಕ್ಕಳು ಸೇರಿದಂತೆ 9 ಜನರು ದುರ್ಮರಣ ಹೊಂದಿರುವ ಘಟನೆ ಅರಸೀಕೆರೆ ತಾಲೂಕಿನ ಗಾಂಧಿನಗರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಸರ್ಕಾರಿ ಬಸ್ ಮತ್ತು ಟ್ಯಾಂಕರ್ ನಡುವೆ ಸಿಲುಕಿದ ಟೆಂಪೋ ಟ್ರಾವೆಲರ್ ನಜ್ಜು ಗುಜ್ಜಾಗಿದ್ದು, ಸ್ಥಳದಲ್ಲಿಯೇ ಐವರು ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಅರಸೀಕೆರೆ ತಾಲೂಕಿನ ಬಾಣವಾರ ಗ್ರಾಮದವರು ಎನ್ನಲಾಗಿದೆ.
ಟೆಂಪೋ ಟ್ರಾವೆಲರ್ ನಲ್ಲಿದ್ದವರು ಧರ್ಮಸ್ಥಳಕ್ಕೆ ಹೋಗಿ ತಮ್ಮೂರಿಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇನ್ನೂ ಐದಾರು ಕಿಲೋಮೀಟರ್ ಕ್ರಮಿಸಿದ್ದರೆ ಊರು ತಲುಪುತ್ತಿದ್ದರು ಅಷ್ಟರಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಮೃತರಲ್ಲಿ ನಾಲ್ವರು ಮಕ್ಕಳು ಕೂಡಾ ಸೇರಿದ್ದಾರೆ.
ಸಾವಿನ ಸಂಖ್ಯೆ ಮತ್ತಷ್ಟ ಹೆಚ್ಟಾಗುವ ಸಾಧ್ಯತೆಯಿದೆ. ಗಾಯಾಳುಗಳನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಬಾಣಾವರ ಠಾಣೆ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ