ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳ ಬಿಡುಗಡೆ: ಅಮಿತ್ ಶಾ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

2002ರ ಬಿಲ್ಕಿಸ್ ಬಾನೋ  ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯೇ ಆದೇಶ ನೀಡಿದ್ದು, ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: 2002ರ ಬಿಲ್ಕಿಸ್ ಬಾನೋ  ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯೇ ಆದೇಶ ನೀಡಿದ್ದು, ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಲು ಗೃಹ ಸಚಿವಾಲಯ ನೀಡಿರುವ ಆದೇಶವು ಬಿಜೆಪಿ ನಾಯಕರ ಕ್ರೂರ ಮನಸ್ಥಿತಿಯನ್ನು ತೋರಿಸುತ್ತದೆ. ಈ ಅಮಾನವೀಯ ರಣಹದ್ದುಗಳಿಗೆ ಕ್ಷಮಾದಾನ ನೀಡುವ ಮೂಲಕ ಇಡೀ ದೇಶಕ್ಕೆ ಅವಮಾನ ಮಾಡಿದ್ದಾರೆ. ಅಮಿತ್ ಶಾ ರಾಜೀನಾಮೆ ನೀಡಬೇಕು ಮತ್ತು ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು' ಎಂದಿದ್ದಾರೆ.

'ಬಿಜೆಪಿಯವರು ಸೂಕ್ಷ್ಮ ವಿಷಯವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿರುವುದು ದುರದೃಷ್ಟಕರ. ಆ ಅಮಾನವೀಯ ಅತ್ಯಾಚಾರಿಗಳು ಮತ್ತು ಕೊಲೆಗಾರರ ​​ಬಿಡುಗಡೆಯು ಗುಜರಾತ್ ಚುನಾವಣೆಗೆ ಮುಂಚಿತವಾಗಿ ಮತದಾರರನ್ನು ಧ್ರುವೀಕರಣಗೊಳಿಸುವುದಕ್ಕಾಗಿದೆ. ಬಿಜೆಪಿಗೆ, ಈ ದೇಶದ ಮಹಿಳೆಯರ ಕಾಳಜಿಗಿಂತ ಚುನಾವಣೆ ಮುಖ್ಯವಾಗಿದೆ' ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.

'ಈ ನಿರ್ಧಾರ ಕೈಗೊಂಡಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಮಹಿಳಾ ಸಂಸದರು ಎಲ್ಲಿದ್ದರು. ಮಹಿಳೆಯರ ಪರವಾಗಿ ನಿಲ್ಲಲು ಅವರಿಗೆ ಸಾಧ್ಯವಾಗಲಿದ್ದರೆ, ತಮ್ಮ ಸ್ಥಾನಗಳಲ್ಲಿ ಮುಂದುವರಿಯಲು ಅವರು ಅನರ್ಹರು. ರಾಜಕೀಯ ಕಾರಣಗಳಿಗಾಗಿ ತಮ್ಮ ಪಕ್ಷದಿಂದ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಅವರು ಶಾಂತಿಯುತವಾಗಿ ಮಲಗಬಹುದೇ' ಎಂದು ಪ್ರಶ್ನಿಸಿದ್ದಾರೆ.

'ನರೇಂದ್ರ ಮೋದಿ ಮತ್ತು ಅವರ ತಾಯಿಯ ಸುಂದರ ಬಾಂಧವ್ಯವನ್ನು ಇಡೀ ರಾಷ್ಟ್ರ ಕಂಡಿದೆ. ಆದರೆ ನರೇಂದ್ರ ಮೋದಿಯವರು, ತನ್ನ ಶಿಶು ಮತ್ತು ಹುಟ್ಟಲಿರುವ ಮಗುವನ್ನು ಕಳೆದುಕೊಂಡ ಇನ್ನೊಬ್ಬ ತಾಯಿಯ ನೋವನ್ನು ಏಕೆ ನೋಡಲಿಲ್ಲ. ಕ್ಷಮಾದಾನ ನೀಡುವ ಬಿಜೆಪಿ ಸರ್ಕಾರದ ಈ ಅಮಾನವೀಯ ನಿರ್ಧಾರವನ್ನು ಭಾರತ ಕ್ಷಮಿಸುವುದಿಲ್ಲ' ಎಂದು ಟ್ವೀಟ್‌ ಮಾಡಿದ್ದಾರೆ.

2002 ರ ಗೋಧ್ರಾ ಗಲಭೆ ನಂತರದ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಎಲ್ಲಾ 11 ಅಪರಾಧಿಗಳು ಆಗಸ್ಟ್ 16 ರಂದು ಗೋಧ್ರಾ ಉಪ-ಜೈಲಿನಿಂದ ಹೊರಬಂದಿದ್ದರು. ಗುಜರಾತ್ ಸರ್ಕಾರವು ತನ್ನ ಉಪಶಮನ ನೀತಿಯ ಅಡಿಯಲ್ಲಿ ಅವರನ್ನು ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು.

2008ರ ಜನವರಿ 21 ರಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರ ಹತ್ಯೆಯ ಆರೋಪದ ಮೇಲೆ 11 ಮಂದಿಗೆ ಶಿಕ್ಷೆ ವಿಧಿಸಿತ್ತು. ನಂತರ ಈ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com