ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ 100 ರೂ. ದೇಣಿಗೆ ಪಡೆಯುವ ವಿಚಾರದಲ್ಲಿ ನನ್ನ, ಮುಖ್ಯಮಂತ್ರಿಗಳ ಪಾತ್ರವಿಲ್ಲ: ಸಚಿವ ಬಿಸಿ ನಾಗೇಶ್ ಸ್ಪಷ್ಟನೆ

ರಾಜ್ಯಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ 100 ರೂ ದೇಣಿಗೆ ಪಡೆಯುವ ಪ್ರಕರಣದಲ್ಲಿ ತಮ್ಮ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಯಾವುದೇ ರೀತಿಯ ಪಾತ್ರವಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ.
ಬಿಸಿ ನಾಗೇಶ್
ಬಿಸಿ ನಾಗೇಶ್

ಬೆಂಗಳೂರು: ರಾಜ್ಯಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ 100 ರೂ ದೇಣಿಗೆ ಪಡೆಯುವ ಪ್ರಕರಣದಲ್ಲಿ ತಮ್ಮ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಯಾವುದೇ ರೀತಿಯ ಪಾತ್ರವಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗೇಶ್ ಅವರು, 'ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಗತ್ಯವಿರುವ ಖರ್ಚು–ವೆಚ್ಚಗಳಿಗಾಗಿ ಪೋಷಕರಿಂದ ದೇಣಿಗೆಯಾಗಿ ಪ್ರತಿ ತಿಂಗಳು  100 ರೂ ಸಂಗ್ರಹಿಸಲು ಎಸ್‌ಡಿಎಂಸಿಗಳಿಗೆ ಅನುಮತಿ ನೀಡಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದರಲ್ಲಿ ನನ್ನದಾಗಲಿ ಅಥವಾ ಮುಖ್ಯಮಂತ್ರಿಯದ್ದಾಗಲಿ ಪಾತ್ರವಿಲ್ಲ.. ಹೀಗೆ ದೇಣಿಗೆ ಸಂಗ್ರಹಿಸಲು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ಅವಕಾಶವಿದೆ. ಅದನ್ನು ಬಳಸಿ, ಎಸ್‌ಡಿಎಂಸಿಗಳ ಮನವಿ ಮೇರೆಗೆ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

ಅಂತೆಯೇ, ಈ ಮಹತ್ವದ ವಿಷಯವೂ ಸಚಿವರ ಗಮನದಲ್ಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸುತ್ತೋಲೆಗಳನ್ನು ಹೊರಡಿಸುವುದಕ್ಕೆ ಅಧಿಕಾರಿಗಳಿಗೆ ಕಾನೂನಿನಲ್ಲಿ ಅಧಿಕಾರವಿದೆ. ಎಲ್ಲ ಸುತ್ತೋಲೆಗಳನ್ನೂ ಸರ್ಕಾರದ ಗಮನಕ್ಕೆ ತಂದೇ ಹೊರಡಿಸಬೇಕು ಎಂದೇನೂ ಇಲ್ಲ, ಕೆಲವರು, ಸುತ್ತೋಲೆಯನ್ನು ಸರಿಯಾಗಿ ಓದದೇ ಪ್ರತಿಕ್ರಿಯಿಸಿದ್ದಾರೆ. ಶಾಲೆಯ ಅಭಿವೃದ್ಧಿಗೆ ಸ್ಥಳೀಯವಾಗಿ ಹಣ ಸಂಗ್ರಹಿಸಲು ಆರ್‌ಟಿಇಯಡಿ ಅವಕಾಶ ಕಲ್ಪಿಸಲಾಗಿದೆ. ಇದನ್ನು ಜಾರಿಗೆ ತಂದವರೇ ಕಾಂಗ್ರೆಸ್‌ನವರು. ಅದರಲ್ಲಿರುವ ಅಂಶ ಬಳಸಿಕೊಂಡು ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡರೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧಿಸುತ್ತಿದ್ದಾರೇಕೆ? ಎಂದು ಪ್ರಶ್ನಿಸಿದರು. 

ಅಲ್ಲದೆ, ಪೋಷಕರಿಂದ ಬಲವಂತವಾಗಿ ಹಣ ಸಂಗ್ರಹಿಸುವಂತೆ ಹೇಳಿಲ್ಲ. ಅವರಾಗಿಯೇ ಕೊಟ್ಟರೆ, ತಿಂಗಳಿಗೆ 100 ರೂ ಪಡೆದು ರಸೀದಿ ಕೊಡಬೇಕು. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಕಾನೂನು ಪಂಡಿತ ಎಂದು ಭಾವಿಸಿರುವ ಸಿದ್ದರಾಮಯ್ಯ ಇಂಥದ್ದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ...ಎಸ್‌ಡಿಎಂಸಿಗಳು ಹಣ ದುರುಪಯೋಗ ಮಾಡಿಕೊಳ್ಳುವುದು ಕಂಡುಬಂದರೆ ಸುತ್ತೋಲೆ ಹಿಂಪಡೆಯಲಾಗುವುದು ಎಂದು ತಿರುಗೇಟು ನೀಡಿದರು.

ಶಾಲೆಗಳಲ್ಲಿ ಎಲ್‌ಕೆಜಿ–ಯುಕೆಜಿ ಆರಂಭಿಸಿದವರು ಅಲ್ಲಿ ಪಾಠ ಮಾಡುವವರಿಗೆ ಸಂಭಾವನೆಗೆ ವ್ಯವಸ್ಥೆ ಮಾಡಿಲ್ಲ. ಹೀಗಾಗಿ, ಸಂಭಾವನೆಗಾಗಿ ಹಣ ಸಂಗ್ರಹಿಸಲು ಸುತ್ತೋಲೆ ಹೊರಡಿಸಲಾಗಿದೆ. ಕಾಂಗ್ರೆಸ್ ಸರ್ಕಾರವಿದ್ದಾಗಲೇ ಮಾಡಿರುವ ಕಾಯ್ದೆಯದು. ಆಗೇಕೆ ಅವಕಾಶ ಕೊಟ್ಟರು? ಅವರ ಸರ್ಕಾರದಲ್ಲಿ ಹಣವಿರಲಿಲ್ಲವೇ? ದುಡ್ಡಿದ್ದಿದ್ದರೆ 5 ವರ್ಷಗಳಲ್ಲಿ ಶಾಲೆಗಳಲ್ಲಿ 4,618 ಕೊಠಡಿಗಳನ್ನು ಮಾತ್ರ ಕಟ್ಟಿದರೇಕೆ? ಹೆಚ್ಚಿನ ಶಿಕ್ಷಕರನ್ನು ನೇಮಿಸಿಕೊಳ್ಳಲಿಲ್ಲವೇಕೆ?.. ದೇಣಿಗೆ ಸಂಗ್ರಹಿಸುವುದು ಬೇಡ ಎನ್ನುವುದಾದರೆ, ಎಲ್‌ಕೆಜಿ–ಯುಕೆಜಿ ತರಗತಿಗಳನ್ನು ನಿಲ್ಲಿಸಿ ಬಿಡೋಣವಾ?’ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com