ಬೆಂಗಳೂರು: 7 ವರ್ಷದ ಬಾಲಕನ ಮೇಲೆ ಪಿಟ್ಬುಲ್ಸ್ ನಾಯಿಗಳ ದಾಳಿ; ತೀವ್ರ ಗಾಯ, ಮಾಲೀಕರಿಗೆ ಬಂಧನ ಭೀತಿ
ಬೆಂಗಳೂರು: ಶಾಲೆಯಿಂದ ಹಿಂತಿರುಗಿದ 7 ವರ್ಷದ ಬಾಲಕನ ಮೇಲೆ ಎರಡು ಪಿಟ್ಬುಲ್ ನಾಯಿಗಳು ದಾಳಿ ನಡೆಸಿ ಬಾಲಕ ಗಂಭೀರ ಗಾಯಗೊಂಡು 58 ಹೊಲಿಗೆಗಳನ್ನು ಹಾಕಿರುವ ಘಟನೆ ಹಳೆ ಮದ್ರಾಸ್ ರಸ್ತೆಯ ಕೆ ಆರ್ ಪುರಂನ ಆರ್ ಕೆಎಂ ಲೇ ಔಟ್ ನಲ್ಲಿ ನಡೆದಿದೆ.
ಎಂ ಅರುಣ್ ಮತ್ತು ವೆನಿಲ್ಲಾ ಅವರ ಪುತ್ರನಾಗಿರುವ 2ನೇ ತರಗತಿಯ ಎ ಲಿತಿನ್ ಮೇಲೆ ಕಳೆದ ಸೋಮವಾರ ಅಪರಾಹ್ನ ಪಿಟ್ಬುಲ್ ನಾಯಿಗಳು ದಾಳಿ ನಡೆಸಿ ಬಾಲಕ ಗಂಭೀರ ಗಾಯಗೊಂಡಿದ್ದಾನೆ. ಮನೆಯ ನೆಲ ಮಹಡಿಯಲ್ಲಿ ನಾಯಿಗಳು ಓಡಾಡುತ್ತಿರುವುದನ್ನು ಕಂಡು ಅರುಣ್ ನಾಯಿಯ ಮಾಲೀಕ ಕೆ ರಂಜಿತ್ ಅವರನ್ನು ಕರೆದು ನಾಯಿಯನ್ನು ಕಟ್ಟಿಹಾಕಿ ಎಂದು ಕೇಳಿಕೊಂಡಿದ್ದರು. ಆಗ ಮಾತಿಗೆ ಮಾತು ಬೆಳೆದು ಅರುಣ್ ಮತ್ತು ರಂಜಿತ್ ಮಧ್ಯೆ ವಾಗ್ಯುದ್ಧವೇ ನಡೆದುಹೋಯಿತು. ಇದರಿಂದ ನಾಯಿಗಳು ಉದ್ರಿಕ್ತಗೊಂಡು ಮಗುವಿನ ಮೇಲೆ ದಾಳಿ ನಡೆಸಿದೆ.
ನಾಯಿಗಳ ಮಾಲೀಕ 26 ವರ್ಷದ ರಂಜಿತ್ ಮತ್ತು ಮನೆ ಮಾಲೀಕ ಅನಿಲ್ ಕುಮಾರ್ ವಿರುದ್ಧ ಅರುಣ್ ದೂರು ದಾಖಲಿಸಿದ್ದಾರೆ. ರಂಜಿತ್ ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರೆ ಅರುಣ್ ಅವರ ಕುಟುಂಬ ನೆಲಮಹಡಿಯಲ್ಲಿ ವಾಸಿಸುತ್ತಿದೆ. ಇದೇ ನಾಯಿಗಳು ಏಳು ತಿಂಗಳ ಹಿಂದೆ ತಾಯಿ-ಮಗನ ಮೇಲೆ ದಾಳಿ ನಡೆಸಿದ್ದವು. ಮಕ್ಕಳು ಆಟವಾಡುತ್ತಿರುವಾಗ ನಾಯಿಗಳನ್ನು ಬಿಡಬೇಡಿ ಎಂದು ಮನೆ ಮಾಲೀಕರು ಆ ಸಮಯದಲ್ಲಿ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಲಖನೌ: ಮಗ ಸಾಕಿದ ಪಿಟ್ಬುಲ್ ನಾಯಿಯಿಂದಲೇ ತಾಯಿ ಸಾವು!
ನಾಯಿಗಳು ಕಚ್ಚಿ ನನ್ನ ಮಗನ ಮುಖದ ಬಲಭಾಗವು ವಿರೂಪಗೊಂಡಿದ್ದು, ಅವನಿಗೆ 58 ಹೊಲಿಗೆಗಳನ್ನು ಹಾಕಲಾಗಿದೆ. ನೋವು ಸಹಿಸಲು ಸಾಧ್ಯವಾಗುತ್ತಿಲ್ಲ, ಮಗನ ಸ್ಥಿತಿ ಗಂಭೀರವಾಗಿದೆ. ದೂರನ್ನು ಹಿಂಪಡೆಯುವಂತೆ ಮನವಿ ಮಾಡಿದ ರಂಜಿತ್, ಎಲ್ಲಾ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ನಾನು ಒಪ್ಪಿಲ್ಲ ಎಂದು ಬ್ಯಾಟರಿ ಉತ್ಪಾದನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಅರುಣ್ ಹೇಳುತ್ತಾರೆ.
ಈ ಮನೆಗೆ ಕಳೆದ ಡಿಸೆಂಬರ್ ನಲ್ಲಿ ನಾವು ಬಂದಿದ್ದೆವು. ರಂಜಿತ್ ಕುಟುಂಬ ಅದಕ್ಕೆ ಒಂದು ತಿಂಗಳ ಮೊದಲು ಬಂದಿದ್ದಾರೆ. ಮನೆಯಲ್ಲಿ ನಾಯಿ ಇದೆ ಎಂದು ಮಾಲೀಕರು ಹೇಳಿದ್ದರೆ ನಾವು ಬರುತ್ತಿರಲಿಲ್ಲ. ಈ ಹಿಂದೆ ನಾಯಿ ದಾಳಿ ಮಾಡಿದ್ದಾಗ ಮನೆ ಮಾಲೀಕರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನಾಯಿಗಳನ್ನು ಮಾರುತ್ತೇನೆ ಎಂದು ಹೇಳಿದ್ದ ರಂಜಿತ್ ಮಾರಾಟ ಮಾಡಿರಲಿಲ್ಲ. ಹಿಂದೆ ಅವರ ಬಳಿ ಮೂರು ನಾಯಿಗಳಿದ್ದವು ಅವುಗಳಲ್ಲಿ ಒಂದನ್ನು ಮಾತ್ರ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮನೆ ಮಾಲೀಕರು ಜವಾಬ್ದಾರರು: ಕಳೆದ ಸೋಮವಾರ ಅಪರಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದ್ದು ಆ ದಿನ ಮಗನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಬೇಕಾಗಿದ್ದರಿಂದ ಮರುದಿನ ಅವರು ದೂರು ನೀಡಿದ್ದರು. ರಂಜಿತ್ ಘಟನೆ ನಡೆದ ಮೇಲೆ ನಾಯಿಗಳನ್ನು ಅಡಗಿಸಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇಬ್ಬರು ಆರೋಪಿಗಳನ್ನು ಬಂಧಿಸಲಾಗುವುದು. ಬಾಲಕನ ಆರೋಗ್ಯ ಗಂಭೀರವಾಗಿದೆ. ಮನೆ ಮಾಲೀಕರು ಕೂಡ ಈ ಘಟನೆಗೆ ಕಾರಣರಾಗಿರುತ್ತಾರೆ ಎಂದು ಆವಲಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ