ಶಿವಮೊಗ್ಗ: ಭಾರತದಲ್ಲಿ ಐಸಿಸ್ ಚಟುವಟಿಕೆ ಹೆಚ್ಚಿಸಲು ಸಂಚು; ಬಂಧಿತರಿಂದ 'ಸ್ಫೋಟಕ' ಮಾಹಿತಿ
ಇಬ್ಬರು ಶಂಕಿತ ಉಗ್ರರು ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಭಾರತದಲ್ಲಿ ಅಸ್ತಿತ್ವಕ್ಕಾಗಿ ಹರಸಾಹಸಪಡುತ್ತಿರುವ ಐಸಿಸ್ ಚಟುವಟಿಕೆಗಳ ಹೆಚ್ಚಿಸಲು ಬಂಧಿತರು ಸಂಚು ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
Published: 23rd September 2022 01:49 PM | Last Updated: 23rd September 2022 02:42 PM | A+A A-

ಶಂಕಿತ ಉಗ್ರರ ಬಂಧನ
ಶಿವಮೊಗ್ಗ: ಇಬ್ಬರು ಶಂಕಿತ ಉಗ್ರರು ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಭಾರತದಲ್ಲಿ ಅಸ್ತಿತ್ವಕ್ಕಾಗಿ ಹರಸಾಹಸಪಡುತ್ತಿರುವ ಐಸಿಸ್ ಚಟುವಟಿಕೆಗಳ ಹೆಚ್ಚಿಸಲು ಬಂಧಿತರು ಸಂಚು ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ ಶಿವಮೊಗ್ಗದಲ್ಲಿ ಬಂಧಿಸಲಾದ ಇಬ್ಬರು ಭಯೋತ್ಪಾದಕ ಆರೋಪಿಗಳಾದ ಮಾಝ್ ಮತ್ತು ಸಯೀದ್ ಯಾಸೀನ್ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್ಐಎಸ್) ನ ಭಯೋತ್ಪಾದಕ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಸಂಚು ರೂಪಿಸಲು ಯತ್ನಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತನ್ನ ಭಯೋತ್ಪಾದಕ ಕೃತ್ಯಗಳ ಮೂಲಕ ಭಾರತದ ಏಕತೆ, ಭದ್ರತೆ ಮತ್ತು ಸಾರ್ವಭೌಮತೆಗೆ ಭಂಗ ತರಲು ಬಂಧಿತರು ಸಂಚು ರೂಪಿಸುತ್ತಿದ್ದರು ಎಂಬುದು ಶಿವಮೊಗ್ಗ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ತಲೆಮರೆಸಿಕೊಂಡಿರುವ ಪ್ರಮುಖ ಶಂಕಿತ ಶಾರಿಕ್ ಸೊಪ್ಪುಗುಡ್ಡೆ ಜೊತೆಗೆ ಇಬ್ಬರು ಶಂಕಿತರು ಐಸಿಸ್‌ನ ಅಧಿಕೃತ ಮಾಧ್ಯಮ ಕೇಂದ್ರ ಅಲ್-ಹಯಾತ್‌ನ ಸದಸ್ಯರಾಗಿದ್ದರು ಎನ್ನಲಾಗಿದೆ.
ಶಿವಮೊಗ್ಗದಲ್ಲಿ ಆರೋಪಿಗಳಿಂದ ಬಾಂಬ್ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳು
ಅಮೀರ್ ಅಹ್ಮದ್ ವೃತ್ತದಲ್ಲಿ ಹಿಂದುತ್ವ ಸಿದ್ಧಾಂತಿ ವಿ ಡಿ ಸಾವರ್ಕರ್ ಅವರ ಭಾವಚಿತ್ರವನ್ನು ಸ್ಥಾಪಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಉಂಟಾಗಿ ಸ್ವಾತಂತ್ರ್ಯ ದಿನದಂದು 20 ವರ್ಷದ ಬಟ್ಟೆ ಅಂಗಡಿಯ ಕಾರ್ಮಿಕನಿಗೆ ಚೂರಿಯಿಂದ ಇರಿದ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸಿದ ನಂತರ ಈ ವಿವರಗಳು ಹೊರಬಂದಿವೆ. ಪ್ರಮುಖ ಆರೋಪಿ ಜಬೀವುಲ್ಲಾ ಸೇರಿದಂತೆ ನಾಲ್ವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಜಬೀವುಲ್ಲಾನನ್ನು ತೀವ್ರಗಾಮಿಗೊಳಿಸುವ ಮೂಲಕ ಚೂರಿ ಇರಿತ ಘಟನೆಯಲ್ಲಿ ಶಾರಿಕ್ ಪಾತ್ರವನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಮಾಜದಲ್ಲಿ ಶಾಂತಿ ಕದಡಲು ಯತ್ನ, ಸರ್ಕಾರ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ: 14 ಮಂದಿ ಪಿಎಫ್ಐ ಕಾರ್ಯಕರ್ತರ ಬಂಧನ
ಯಾಸೀನ್ ಮತ್ತು ಮಾಜ್ ಪಿಯುಸಿ ಓದುತ್ತಿದ್ದರು. ಮಾಜ್ ಮೂಲಕ ಶಾರಿಕ್ ಗೆ ಯಾಸೀನ್ ಪರಿಚಯವಾಗಿತ್ತು. ಯಾಸೀನ್ ಮಾಜ್ ಮತ್ತು ಶಾರಿಕ್ ಅವರನ್ನು ಭೇಟಿಯಾದಾಗಲೆಲ್ಲಾ ಅವರು ಜಿಹಾದ್‌ನ ಮೂಲಭೂತ ವಿಚಾರಗಳು ಮತ್ತು ಪರಿಕಲ್ಪನೆಗಳ ಬಗ್ಗೆ ಚರ್ಚಿಸುತ್ತಿದ್ದರು. ಶಾರಿಕ್ ಅವರು ಪಿಡಿಎಫ್ ಫೈಲ್‌ಗಳು, ವಿಡಿಯೋ ಮತ್ತು ಆಡಿಯೊ ಕ್ಲಿಪ್‌ಗಳನ್ನು ಕಳುಹಿಸುತ್ತಿದ್ದರು. ಉಗ್ರವಾದ, ಆಮೂಲಾಗ್ರೀಕರಣ, ಐಸಿಸ್‌ನ ಕೆಲಸಗಳು ಮತ್ತು ಇತರ ಭಯೋತ್ಪಾದನೆಗೆ ಸಂಬಂಧಿಸಿದ ಲಿಂಕ್‌ಗಳನ್ನು ಯಾಸಿನ್‌ಗೆ ಟೆಲಿಗ್ರಾಮ್, ಸಿಗ್ನಲ್, ಇನ್‌ಸ್ಟಾಗ್ರಾಮ್, ವೈರ್, ಎಲಿಮೆಂಟ್ ಮುಂತಾದ ಮೆಸೆಂಜರ್ ಅಪ್ಲಿಕೇಶನ್‌ಗಳ ಮೂಲಕ ಸಂಸ್ಥೆಗಳಿಗೆ ಕಳುಹಿಸುತ್ತಿದ್ದರು.
ತನಿಖಾಧಿಕಾರಿ ಮತ್ತು ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ್ ಅವರು ಆರೋಪಿ ಸಂಖ್ಯೆ 2 ಮಾಜ್ ಮತ್ತು ಆರೋಪಿ ಸಂಖ್ಯೆ 3 ಯಾಸೀನ್ ಅವರನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆ.20 ರಂದು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಶಂಕಿತ ಉಗ್ರರ ಬಂಧನ: ದೇಶಭಕ್ತ ಮುಸಲ್ಮಾನರು ತಮ್ಮ ಮಕ್ಕಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು: ಕೆಎಸ್ ಈಶ್ವರಪ್ಪ
ಭಾರತದಾದ್ಯಂತ ಷರಿಯಾ ಕಾನೂನು ಜಾರಿ?
ಆರೋಪಿಗಳು ಐಸಿಸ್‌ನ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದರು ಮತ್ತು ಐಸಿಸ್‌ನ ಅಜೆಂಡಾದಂತೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು ಎಂದು ಎಸ್‌ಪಿ ಹೇಳಿದ್ದು, ಭಾರತದ ಸ್ವಾತಂತ್ರ್ಯವು ಕೇವಲ ಬ್ರಿಟಿಷರ ಆಳ್ವಿಕೆಯಿಂದ ಮಾತ್ರ.. ದೇಶಾದ್ಯಂತ ಷರಿಯಾ ಕಾನೂನು ಜಾರಿ ಮಾಲೂಕ ನಿಜವಾದ ಸ್ವಾತಂತ್ರ್ಯವನ್ನು ಸಾಧಿಸಬಹುದು ಎಂದು ಬಂಧಿತರು ನಂಬಿದ್ದರು. ಅಸ್ತಿತ್ವದಲ್ಲಿರುವ ಭಾರತೀಯ ವ್ಯವಸ್ಥೆಯ ವಿರುದ್ಧ ಯುದ್ಧವನ್ನು ನಡೆಸುವುದು ಮತ್ತು ಕ್ಯಾಲಿಫಟ್ ಅನ್ನು ಸ್ಥಾಪಿಸುವುದು ಮತ್ತು ಷರಿಯಾ ಕಾನೂನನ್ನು ಜಾರಿಗೊಳಿಸುವ ಮೂಲಕ ನಿಜವಾದ ಸ್ವಾತಂತ್ರ್ಯ ಪಡೆಯಬೇಕು. ಇಸ್ಲಾಂ ಧರ್ಮವನ್ನು ಎತ್ತಿ ಹಿಡಿಯಲು ಐಸಿಸ್ ಹೇಗೆ ಜಿಹಾದ್ ಮೂಲಕ ಅನ್ಯಧರ್ಮೀಯರ ವಿರುದ್ಧ ಹೇಗೆ ಕಾರ್ಯಾಚರಣೆ ನಡೆಸುತ್ತದೆ ಮತ್ತು ಯುದ್ಧ ಘೋಷಿಸುತ್ತದೆಯೋ ಅದೇ ರೀತಿ ಅವರೂ ಕಾಫಿರರ ವಿರುದ್ಧ ಜಿಹಾದ್ ನಡೆಸಬೇಕು ಮತ್ತು ಸ್ಫೋಟಕಗಳನ್ನು ತಯಾರಿಸಲು ಬೇಕಾದ ವಸ್ತುಗಳನ್ನು ಸಂಗ್ರಹಿಸಬೇಕು ಎಂದು ಅವರು ನಂಬುತ್ತಾರೆ ಎಂದು ಪ್ರಸಾದ್ ಹೇಳಿದ್ದಾರೆ.