ಬೆಳಗಾವಿ ಬಳಿ ಭೀಕರ ಅಪಘಾತ: ಎಎಸ್ ಐ ಕುಟುಂಬ ಸೇರಿ ನಾಲ್ವರು ದುರ್ಮರಣ

ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬೂದಿಗೊಪ್ಪ ಕ್ರಾಸ್‌ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇಂದು  ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಕುಟುಂಬದ ಇಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಭಾನುವಾರ ತಾಲೂಕಿನ ಸೌಂದತ್ತಿಯ ಯರಗಟ್ಟಿ ರಸ್ತೆಯಲ್ಲಿ ಜಖಂಗೊಂಡ ಕಾರನ್ನು ಜೆಸಿಬಿ ಯಂತ್ರದ ಮೂಲಕ ರಸ್ತೆಯಿಂದ ತೆಗೆಯಲಾಯಿತು
ಭಾನುವಾರ ತಾಲೂಕಿನ ಸೌಂದತ್ತಿಯ ಯರಗಟ್ಟಿ ರಸ್ತೆಯಲ್ಲಿ ಜಖಂಗೊಂಡ ಕಾರನ್ನು ಜೆಸಿಬಿ ಯಂತ್ರದ ಮೂಲಕ ರಸ್ತೆಯಿಂದ ತೆಗೆಯಲಾಯಿತು

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬೂದಿಗೊಪ್ಪ ಕ್ರಾಸ್‌ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇಂದು  ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಕುಟುಂಬದ ಇಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಲಾರಿ, ಕಾರು ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿ ಈ ಅಪಘಾತವಾಗಿದೆ. ಮೃತರನ್ನು ಕುಡಚಿ ಎಎಸ್ಐ ಪರಶುರಾಮ ಹಲಕಿ ಅವರ ಪತ್ನಿ ರುಕ್ಮಿಣಿ ಹಲಕಿ (48), ಪುತ್ರಿ ಅಕ್ಷತಾ (22) ಕಾರ್‌ ಚಾಲಕ ನಿಖಿಲ್ ಕದಂ (24)  ಹಣಮವ್ವ ಚಿಪ್ಪಲಕಟ್ಟಿ ಎಂದು ಗುರುತಿಸಲಾಗಿದೆ. 

ಎಎಸ್ಐ ಪರಶುರಾಮ ಅವರ ಪತ್ನಿ, ಪುತ್ರಿ ಕಾರಿನಲ್ಲಿ ಯರಗಟ್ಟಿ ಕಡೆಗೆ ಹೊರಟಿದ್ದಾಗ  ಎದುರಿಗೆ ಬಂದ ಸಿಮೆಂಟ್‌ ತುಂಬಿದ್ದ ಲಾರಿಗೆ  ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನ ಹಿಂದೆಯೇ ಹೊರಟಿದ್ದ ಬೈಕ್‌ ಸವಾರರಿಗೂ ಈ ವಾಹನಗಳು ಗುದ್ದಿವೆ. ಅಪಘಾತದ ರಭಸಕ್ಕೆ ಕಾರು, ಬೈಕ್‌ ಸಂಪೂರ್ಣ ನಜ್ಜುಗುಜ್ಜಾದವು. ರುಕ್ಮಿಣಿ, ಅಕ್ಷತಾ ಹಾಗೂ ನಿಖಿಲ್‌ ಸ್ಥಳದಲ್ಲೇ ಕೊನೆಯುಸಿರೆಳೆದರು. ಹಣಮವ್ವ ಎನ್ನುವ ವೃದ್ಧೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 

ಬೈಕ್‌ ಸವಾರ ಹಾಗೂ ಹಿಂಬದಿಯಲ್ಲಿ ಕುಳತವರು ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ನಗರದ ಆಸ್ಪತ್ರೆಗೆ ಸಾಗಿಸಲಾಗಿದೆ. ಲಾರಿ ಅಡಿಗೆ ಸಿಲುಕಿದ ಕಾರಿನಲ್ಲಿದ್ದ ದೇಹಗಳನ್ನು ತೆಗೆಯಲು ಸಾಕಷ್ಟು ಸಂಕಷ್ಟ ಪಡಬೇಕಾಯಿತು. ಸರಣಿ ಅಪಘಾತದಿಂದಾಗಿ ಬಾಚಿ– ರಾಯಚೂರು ರಾಜ್ಯ ಹೆದ್ದಾರಿ ಸಂಚಾರ ಬಂದ್‌ ಆಯಿತು.

ಎರಡು ತಾಸಿನ ನಂತರ ಪೊಲೀಸರು ವಾಹನಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸಿದರು. ಈ ಬಗ್ಗೆ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com