ಹಾಸನ: ಎಚ್ ಡಿ ರೇವಣ್ಣ ಆರೋಪ; ಸ್ವಯಂ ವರ್ಗಾವಣೆಗೆ ಡಿವೈಎಸ್ ಪಿ ಉದಯ್ ಭಾಸ್ಕರ್ ಆಗ್ರಹ

ಜಾತ್ಯಾತೀತ ಜನತಾದಳದ ನಾಯಕ ಹೆಚ್ ಡಿ ರೇವಣ್ಣ ಅವರ ಆರೋಪಗಳಿಂದ ಬೇಸತ್ತು ಡಿವೈಎಸ್ ಪಿ ಉದಯ್ ಭಾಸ್ಕರ್ ಅವರು ವರ್ಗಾವಣೆ ಮಾಡುವಂತೆ ತಾವೇ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಡಿವೈಎಸ್ ಪಿ ಉದಯ್ ಭಾಸ್ಕರ್-ಹೆಚ್ ಡಿ ರೇವಣ್ಣ
ಡಿವೈಎಸ್ ಪಿ ಉದಯ್ ಭಾಸ್ಕರ್-ಹೆಚ್ ಡಿ ರೇವಣ್ಣ

ಹಾಸನ: ಜಾತ್ಯಾತೀತ ಜನತಾದಳದ ನಾಯಕ ಹೆಚ್ ಡಿ ರೇವಣ್ಣ ಅವರ ಆರೋಪಗಳಿಂದ ಬೇಸತ್ತು ಡಿವೈಎಸ್ ಪಿ ಉದಯ್ ಭಾಸ್ಕರ್ ಅವರು ವರ್ಗಾವಣೆ ಮಾಡುವಂತೆ ತಾವೇ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಡಿವೈಎಸ್‌ಪಿ ಉದಯ್ ಭಾಸ್ಕರ್ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಅವರ ವಿರುದ್ಧ ಕ್ರಮಕ್ಕೆ ಹೆಚ್‌ಡಿ ರೇವಣ್ಣ ಒತ್ತಾಯಿಸಿದ್ದರು. ಇದೀಗ ಡಿವೈಎಸ್‌ಪಿ ಮನನೊಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಸ್ವಯಂ ವರ್ಗಾವಣೆಗೆ ಕೋರಿದ್ದಾರೆ. 

ನಾನು ನಿಷ್ಪಕ್ಷಪಾತ, ನೇರ ನುಡಿಯ ವ್ಯಕ್ತಿತ್ವವುಳ್ಳವನು. ರಾಜಕಾರಣಿಗಳು ನನ್ನಿಂದ ಕಾನೂನು ಬಾಹಿರ ಕ್ರಮ ಆಪೇಕ್ಷಿಸುತ್ತಿದ್ದಾರೆ. ಅವರ ಒತ್ತಾಯಗಳಿಗೆ ನಾನು ಮಣಿಯದ ಕಾರಣ ನನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉದಯ್ ಭಾಸ್ಕರ್ ಪರೋಕ್ಷವಾಗಿ ಮಾಜಿ ಸಚಿವ ರೇವಣ್ಣ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. 

ನನ್ನ ಮೇಲೆ ಆರೋಪ ಮಾಡಿ ನನ್ನ ಮೇಲಾಧಿಕಾರಿಗಳಿಗೆ ಮಾನಸಿಕ ಒತ್ತಡಗಳನ್ನು ನೀಡುತ್ತಿದ್ದಾರೆ. ರಾಜಕಾರಣಿಗಳು ಈ ಚುನಾವಣಾ ಸಂದರ್ಭದಲ್ಲಿ ನನಗೆ ಸುಗಮವಾಗಿ ಕೆಲಸ ಮಾಡಲು ಅಡ್ಡಿಪಡಿಸಿ ಗೊಂದಲ ಸೃಷ್ಟಿಪಡಿಸುವುದು ಖಚಿತ. ಇದರಿಂದ ಮೇಲಾಧಿಕಾರಿಗಳಿಗೂ ಇರುಸುಮುರುಸು ಉಂಟಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದೀಗ ಬೇಸರದಿಂದಲೇ ತಮ್ಮ ವರ್ಗಾವಣೆಗೆ ಬೇಡಿಕೆ ಇಟ್ಟಿರುವ ಉದಯ್ ಭಾಸ್ಕರ್, ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ನನ್ನನ್ನು ಹಾಸನ ಜಿಲ್ಲೆಯಿಂದ ತಮಗೆ ಸರಿ ಎನಿಸಿದ ಸ್ಥಳಕ್ಕೆ ತಾತ್ಕಾಲಿಕ ವರ್ಗಾವಣೆಗೆ ಕೋರುತ್ತೇನೆ ಎಂದು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ರೇವಣ್ಣ ಗಂಭೀರ ಆರೋಪ; ವರ್ಗಾವಣೆ ಮಾಡುವಂತೆ ಆಗ್ರಹ
ಉದಯ್ ಭಾಸ್ಕರ್ ವಿರುದ್ಧ ಗಂಭೀರ ಆರೋಪ ಮಾಡಿರುವ ಎಚ್.ಡಿ.ರೇವಣ್ಣ ಅವರನ್ನು ಅಮಾನತುಗೊಳಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಉದಯಭಾಸ್ಕರ್ ಅವರು ಆಯಾ ಪೊಲೀಸ್ ಠಾಣೆಗಳ ರೌಡಿ ಶೀಟರ್‌ಗಳೊಂದಿಗೆ ನಂಟು ಹೊಂದಿದ್ದು, ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಎಚ್‌ಡಿ ರೇವಣ್ಣ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com