ತನಿಖೆಗೆ ಅಸಹಕಾರ: ಮಾಡಾಳ್ ವಿರೂಪಾಕ್ಷಪ್ಪ-ಪುತ್ರನ ಮುಖಾಮುಖಿ ಕೂರಿಸಿ ಮಾಹಿತಿ ಪಡೆಯಲು ಅಧಿಕಾರಿಗಳು ಮುಂದು!

ಲಂಚ ಪಡೆದ ಆರೋಪ ಪ್ರಕರಣದ ತನಿಖೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಎಂವಿ ಪ್ರಶಾಂತ್ ಕುಮಾರ್ ಅವರು, ತನಿಖೆಗೆ ಅಸಹಕಾರ ತೋರುತ್ತಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ಮುಖಾಮುಖಿ ಕೂರಿಸಿ ಮಾಹಿತಿ ಪಡೆದುಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ
Updated on

ಬೆಂಗಳೂರು: ಲಂಚ ಪಡೆದ ಆರೋಪ ಪ್ರಕರಣದ ತನಿಖೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಎಂವಿ ಪ್ರಶಾಂತ್ ಕುಮಾರ್ ಅವರು, ತನಿಖೆಗೆ ಅಸಹಕಾರ ತೋರುತ್ತಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ಮುಖಾಮುಖಿ ಕೂರಿಸಿ ಮಾಹಿತಿ ಪಡೆದುಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಶನಿವಾರವಷ್ಟೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ ಜಯಂತಕುಮಾರ್ ಅವರ ಮುಂದೆ ವಾದ ಮಂಡಿಸಿದ್ದ ಕರ್ನಾಟಕ ಲೋಕಾಯುಕ್ತದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ), ನ್ಯಾಯಾಲಯವು ಪ್ರಶಾಂತ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ಮೂಲಕ ಬಲವಾದ ಸಂದೇಶವನ್ನು ರವಾನಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

ದಾಳಿ ವೇಳೆ ಹಣ ನೀಡಿದ್ದ ವ್ಯಕ್ತಿಗಳು ಹಾಗೂ ಇತರರ ಹೆಸರಿರುವ ಹಾಳೆಯೊಂದನ್ನು ಪ್ರಶಾಂತ್ ಅವರು ತಿನ್ನಲು ಯತ್ನಿಸಿದ್ದರು ಆದರೆ, ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇತರರೊಂದಿಗೆ ಪ್ರಶಾಂತ್ ಮಾತನಾಡಿದ್ದ ಮಾತುಕತೆ ಸ್ಮಾರ್ಟ್ ವಾಚ್ ನಲ್ಲಿ ದಾಖಲಾಗಿತ್ತು. ಇದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೂ ಜಾಮೀನು ನೀಡಬಾರದು ಎಂದು ಹೇಳಿದ್ದರು.

ಬಿಡಬ್ಲ್ಯೂಎಸ್ಎಸ್'ಬಿ ಮುಖ್ಯ ಅಕೌಂಟೆಂಟ್ ಆಗಿರುವ ಪ್ರಶಾಂತ್ ಅವರನ್ನು ಮಾರ್ಚ್ 2 ರಂದು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ನಿಂದ ಟೆಂಡರ್ ಪಡೆಯಲು ಸಂಸ್ಥೆಯೊಂದರಿಂದ ರೂ.40 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರೂ ಕೂಡ ಸಿಲುಕಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕರ ಹೇಳಿಕೆಯನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದು, ಈ ಹೇಳಿಕೆಯನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಹಗರಣದಲ್ಲಿ ಇಬ್ಬರ ಪಾತ್ರ ಇರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಲೋಕಾಯುಕ್ತದ ವಿಶೇಷ ಸರ್ಕಾರಿ ಅಭಿಯೋಜಕ ನ್ಯಾಯಾಲಯದ ಮುಂದೆ ವಾದಿಸಿದರು.

ಇದೇ ವೇಳೆ ಪ್ರತಿವಾದಿಸಿದ ಪ್ರಶಾಂತ್ ಪರ ವಕೀಲರು, ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಲು ಅಗತ್ಯವಾದ ಚೆಕ್ ಲಿಸ್ಟ್ ನೀಡದೆ ಸಿಆರ್‌ಪಿಸಿ ಸೆಕ್ಷನ್ 41 ಅನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರು ಜಾಮೀನಿಗೆ ಅರ್ಹರಾಗಿದ್ದಾರೆ ಎಂದು ವಾದಿಸಿದರು.

ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಏಪ್ರಿಲ್ 10 ರಂದು ಆದೇಶವನ್ನು ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದ್ದು, ಈ ಮಧ್ಯೆ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಏಪ್ರಿಲ್ 11 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com