
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ರಾಜಕೀಯ ಮುಖಂಡರು, ಕಾರ್ಯಕರ್ತರ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದ್ದು, ಚುನಾವಣಾ ಆಯೋಗ ಈವರೆಗೂ 730 FIRಗಳನ್ನು ದಾಖಲಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾರ್ಚ್ 29ರಿಂದ ಇಲ್ಲಿಯವರೆಗೆ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ 730 ಎಫ್‍ಐಆರ್ ದಾಖಲಿಸಲಾಗಿದೆ. ಇದರ ಜತೆಗೆ ನಗದು ಸೇರಿದಂತೆ ಸುಮಾರು 39 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ನಿನ್ನೆ ಒಂದೇ ದಿನ 14 ಎಫ್‍ಐಆರ್ ದಾಖಲು ಮಾಡಿ ಐದು ಲಕ್ಷ ನಗದು, 9,319 ಲೀಟರ್ ಮದ್ಯ, 2.32 ಕೆ.ಜಿ ಮಾದಕ ದ್ರವ್ಯ, 2771 ಉಡುಗೊರೆ ವಸ್ತುಗಳು ಹಾಗೂ ನಾಲ್ಕು ವಾಹನಗಳನ್ನು ಸೀಜ್ ಮಾಡಲಾಗಿದೆ. ಒಟ್ಟಾರೆ ನಿನ್ನೆ ರಾತ್ರಿವರೆಗೆ 23 ಪ್ರಕರಣಗಳಲ್ಲಿ 7 ಕೋಟಿ ನಗದು, 18 ಕೋಟಿ ಮೌಲ್ಯದ ಮದ್ಯ, 91 ಲಕ್ಷ ರೂ.ಮೌಲ್ಯದ 92 ಕೆ.ಜಿಗೂ ಹೆಚ್ಚು ಮಾದಕ ದ್ರವ್ಯ, 4.66 ಕೋಟಿ ಮೌಲ್ಯದ 153 ಕೆ.ಜಿ ತೂಕದ ಲೋಹ, 710 ಪ್ರಕರಣಗಳಲ್ಲಿ 2.47 ಕೋಟಿ ಮೌಲದ್ಯ ಉಡುಗೊರೆ ವಸ್ತುಗಳು ಹಾಗೂ 71 ಪ್ರಕರಣಗಳಲ್ಲಿ 3.34 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ನಿನ್ನೆ ಪ್ರಕರಣಗಳು ಸೇರಿದಂತೆ ಇದುವರೆಗೂ 39 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವುದರ ಜತೆಗೆ 730 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ನಗರ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ದಿನದ 24 ಗಂಟೆಗಳ ಕಾಲ ದೂರು ಸ್ವೀಕರಿಸಲು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಇದರ ಜತೆಗೆ 28 ವಿಧಾನಸಭಾ ಕ್ಷೇತ್ರಗಳ ಆರ್‍ಓ ಮತ್ತು ಎಡಿಇಒ ಕಚೇರಿಗಳಲ್ಲೂ ನಿಯಂತ್ರಣ ಕೊಠಡಿ ಹಾಗೂ ದೂರು ನಿರ್ವಹಣಾ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಸಾರ್ವಜನಿಕರು ಮುಕ್ತವಾಗಿ ದೂರು ನೀಡಬಹುದಾಗಿದ್ದು, ನಿಯಂತ್ರಣ ಕೊಠಡಿ ಜತೆಗೆ ಸಿವಿಜಿಲ್ ಆ್ಯಪ್ ಮೂಲಕವೂ ಸಾರ್ವಜನಿಕರು ಚುನಾವಣಾ ಕುಂದು ಕೊರತೆ ಕುರಿತಂತೆ ದೂರು ನೀಡಬಹುದಾಗಿದೆ.
ರಾಜಕೀಯ ಪಕ್ಷಗಳ ಮುಖಂಡರು ಮತದಾರರಿಗೆ ಆಮಿಷ ಒಡ್ಡುವುದು ಉಡುಗೊರೆ ನೀಡುವುದು ಕಂಡು ಬಂದರೆ ತಕ್ಷಣ ದೂರು ನೀಡಿದರೆ ಸಂಬಂಧ ಪಟ್ಟ ಅಧಿಕಾರಿಗಳು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
Advertisement