ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಚುನಾವಣೆ ಘೋಷಣೆಗೂ ಮುನ್ನ ಚುನಾವಣಾಧಿಕಾರಿಗಳು ಶೋಧ ನಡೆಸಿ ವಸ್ತುಗಳನ್ನು ವಶಕ್ಕೆ ಪಡೆಯುವಂತಿಲ್ಲ: ಹೈಕೋರ್ಟ್

ಸಾಮಾಜಿಕ ಕಾರ್ಯಕರ್ತರೊಬ್ಬರಿಂದ ವಶಪಡಿಸಿಕೊಂಡ ಅಕ್ಕಿ ಚೀಲಗಳನ್ನು ವಾಪಸ್ ನೀಡುವಂತೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್, ಚುನಾವಣೆ ಘೋಷಣೆಯಾದ ನಂತರವೇ ಶೋಧಿಸಿ, ವಸ್ತುಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಚುನಾವಣಾಧಿಕಾರಿಗಳಿಗೆ ಇರುತ್ತದೆ ಎಂದು ಸ್ಪಷ್ಟಪಡಿಸಿದೆ.
Published on

ಬೆಂಗಳೂರು: ಇಲ್ಲಿನ ಸಾಮಾಜಿಕ ಕಾರ್ಯಕರ್ತರೊಬ್ಬರಿಂದ ವಶಪಡಿಸಿಕೊಂಡ ಅಕ್ಕಿ ಚೀಲಗಳನ್ನು ವಾಪಸ್ ನೀಡುವಂತೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್, ಚುನಾವಣೆ ಘೋಷಣೆಯಾದ ನಂತರವೇ ಶೋಧಿಸಿ, ವಸ್ತುಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಚುನಾವಣಾಧಿಕಾರಿಗಳಿಗೆ ಇರುತ್ತದೆ ಎಂದು ಸ್ಪಷ್ಟಪಡಿಸಿದೆ.

ಇಸ್ತಿಯಾಕ್ ಅಹಮದ್ ಸಲ್ಲಿಸಿದ್ದ ಅರ್ಜಿಯ ಕುರಿತು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಚುನಾವಣೆ ಘೋಷಣೆಗೂ ಮುನ್ನ ಯಾವುದೇ ವಸ್ತುವನ್ನು ಶೋಧಿಸಲು ಅಥವಾ ವಶಪಡಿಸಿಕೊಳ್ಳಲು ಚುನಾವಣಾಧಿಕಾರಿಗಳಿಗೆ ಯಾವುದೇ ಅಧಿಕಾರವಿಲ್ಲ. ಚುನಾವಣೆ ಸಲುವಾಗಿ ಅವರನ್ನು ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂಬ ಕಾರಣಕ್ಕೆ ಚುನಾವಣೆ ಘೋಷಣೆಗೂ ಮುನ್ನವೇ ಅವರು ಸದರಿ ಅಧಿಕಾರವನ್ನು ಬಳಸಿಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.

ಚುನಾವಣೆಯ ಘೋಷಣೆಯ ನಂತರ, ಸಂಪೂರ್ಣ ಅಧಿಕಾರ ಚುನಾವಣಾಧಿಕಾರಿಗಳಿಗೆ ಇರುತ್ತದೆ. ಆದರೆ, ಅಲ್ಲಿಯವರೆಗೆ ಅವರಿಗೆ ಯಾವುದೇ ಶೋಧ ನಡೆಸಲು ಅಥವಾ ವಸ್ತುಗಳನ್ನು ವಶಪಡಿಸಿಕೊಳ್ಳಲು ಅಧಿಕಾರ ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
1955ರ ಅಗತ್ಯ ಸರಕುಗಳ ಕಾಯಿದೆಯಡಿಯಲ್ಲಿ ಸಾಮಾನ್ಯ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ಈ ಅಧಿಕಾರ ಇರುತ್ತದೆ. ಆದರೆ, ಈ ಪ್ರಕರಣದಲ್ಲಿ ಹುಡುಕಾಟ ನಡೆಸಿದ ಚುನಾವಣಾಧಿಕಾರಿ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಅಂತಹ ಅಧಿಕಾರ ಇರುವುದಿಲ್ಲ ಮತ್ತು ಅವರ ಕ್ರಮವು ಕಾನೂನುಬಾಹಿರವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಬೆಂಗಳೂರಿನ ಶಿವಾಜಿನಗರದ ನಿವಾಸಿ ಅಹಮದ್ ಅವರು 2023ರ ಮಾರ್ಚ್ 19ರಂದು ಶಿವಾಜಿನಗರದ ಚುನಾವಣಾಧಿಕಾರಿ ತಮ್ಮ ನಿವಾಸದಿಂದ ತಲಾ 25 ಕೆ.ಜಿಯ 530 ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡ ನಂತರ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಚುನಾವಣಾಧಿಕಾರಿ ನೀಡಿದ್ದ ನೋಟಿಸ್‌ಗೆ ಉತ್ತರಿಸಿದ್ದರೂ ಕೂಡ, ಅವರು ಅಕ್ಕಿ ಮೂಟೆಗಳನ್ನು ಹಿಂತಿರುಗಿಸಿರಲಿಲ್ಲ.

ನಾನು ಸಮಾಜ ಸೇವಕನಾಗಿದ್ದು, ಹಬ್ಬ ಹರಿದಿನಗಳಲ್ಲಿ ಬಡವರಿಗೆ ಅಕ್ಕಿ ವಿತರಿಸುತ್ತಿದ್ದೇನೆ. ಅಧಿಕಾರಿಗಳು ತಮ್ಮ ನಿವಾಸದಿಂದ ವಶಪಡಿಸಿಕೊಂಡಿರುವ ಅಕ್ಕಿಯನ್ನು ಸಹ ಅದಕ್ಕಾಗಿಯೇ ಬಳಸಲಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ ಎಂದು ಪರಿಹಾರ ಬಾಂಡ್ ಸಲ್ಲಿಸುವಂತೆ ಅಹ್ಮದ್ ಅವರಿಗೆ ಸೂಚಿಸಲಾಗಿದೆ.

ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿರುವುದು ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಈಗ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಆದ್ದರಿಂದ, ಅರ್ಜಿದಾರರು ಈ ದಾಸ್ತಾನನ್ನು ವಾಪಸ್ ನೀಡಿದ ನಂತರ ಚುನಾವಣೆ ಮುಗಿಯುವವರೆಗೂ ಈ ವಸ್ತುಗಳನ್ನು ವಿತರಣೆಗೆ ಬಳಸಬಾರದು ಎಂದು ಹೇಳಿದ ನ್ಯಾಯಾಲಯ, ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸುವ ಮೂಲಕ ಅರ್ಜಿದಾರರು ಈ ದಾಸ್ತಾನನ್ನು ಹಿಂಪಡೆಯಬಹುದು ಎಂದು ಸೂಚಿಸಲಾಯಿತು.

ವಶಪಡಿಸಿಕೊಂಡ ಅಕ್ಕಿ ಚೀಲಗಳನ್ನು ತಕ್ಷಣವೇ ಅರ್ಜಿದಾರರ ವಶಕ್ಕೆ ನೀಡಬೇಕಾಗಿ ಪ್ರತಿವಾದಿಗಳಿಗೆ ಆದೇಶ ನೀಡಲಾಗಿದ್ದು, ಅರ್ಜಿದಾರರು ಮೇಲಿನ ಷರತ್ತುಗಳಿಗೆ ಬದ್ಧರಾಗಿರಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com