ಅಮೂಲ್ ಜೊತೆ ಕೆಎಂಎಫ್ ವಿಲೀನ ಅಸಾಧ್ಯ: ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

‘ಕೆಎಂಎಫ್‌ ಹಾಗೂ ಅಮೂಲ್‌ ವಿಲೀನಗೊಳಿಸುವ ಉದ್ದೇಶ ಸರ್ಕಾರದ ಮುಂದೆ ಇಲ್ಲ. ಇದು ಅಸಾಧ್ಯ ಕೂಡ. ಕಾಂಗ್ರೆಸ್‌ ಮುಖಂಡರು ವಿನಾಕಾರಣ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಕೆಎಂಎಫ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ‘ಕೆಎಂಎಫ್‌ ಹಾಗೂ ಅಮೂಲ್‌ ವಿಲೀನಗೊಳಿಸುವ ಉದ್ದೇಶ ಸರ್ಕಾರದ ಮುಂದೆ ಇಲ್ಲ. ಇದು ಅಸಾಧ್ಯ ಕೂಡ. ಕಾಂಗ್ರೆಸ್‌ ಮುಖಂಡರು ವಿನಾಕಾರಣ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಕೆಎಂಎಫ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ‘ಕೆಎಂಎಫ್‌ ಹಾಗೂ ಅಮೂಲ್‌ ಸೇರಿಕೊಂಡು ವ್ಯಾಪಾರ ವೃದ್ಧಿಸಬಹುದು ಎಂದು ಕೇಂದ್ರ ಸಹಕಾರ ಸಚಿವರೂ ಆದ ಅಮಿತ್‌ ಶಾ ಮಂಡ್ಯದಲ್ಲಿ ಹೇಳಿಕೆ ನೀಡಿದ್ದರು. ಎರಡನ್ನೂ ವಿಲೀನಗೊಳಿಸುವ ಬಗ್ಗೆ ಹೇಳಿಲ್ಲ. ಎರಡೂ ಸಹಕಾರ ಸಂಸ್ಥೆಗಳು ಹೇಗೆ ಬೆಳೆಯಬೇಕು ಎಂಬ ಮಾರ್ಗದರ್ಶನ ಮಾತ್ರ ನೀಡಿದ್ದರು. ಆದರೆ, ವಿರೋಧ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ. ರಾಜ್ಯದಲ್ಲಿ ಅಮೂಲ್‌ ಮಾರಾಟದ ಬಗ್ಗೆ ಇಷ್ಟು ವಿರೋಧ ಮಾಡುವ ಅವಶ್ಯಕತೆ ಇಲ್ಲ. ದಶಕಗಳಿಂದಲೂ ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳಿವೆ. ಆದರೂ ನಂದಿನಿ ಹಾಲಿನಷ್ಟು ಗುಣಮಟ್ಟ ಹಾಗೂ ಕಡಿಮೆ ಬೆಲೆಯಲ್ಲಿ ಕೊಡುವುದು ಯಾರಿಗೂ ಸಾಧ್ಯವಿಲ್ಲ. ಈಗ ಅಮೂಲ್‌ ಬಂದರೂ ಅದರೊಂದಿಗೆ ಸ್ಪರ್ಧೆ ಮಾಡುವ ಶಕ್ತಿ ನಮಗೂ ಇದೆ’ ಎಂದರು.

‘ರಾಜ್ಯದಲ್ಲಿ ಸುಮಾರು 50 ಲಕ್ಷ ಮತದಾರರು ಕೆಎಂಎಫ್‌ಗೆ ಪರೋಕ್ಷ ಸಂಬಂಧವಿದ್ದಾರೆ. ಹೀಗಾಗಿ, ಬಿಜೆಪಿ ಕೀರ್ತಿಗೆ ಮಸಿ ಬಳಿಯುವ ಉದ್ದೇಶದಿಂದ ಈ ರೀತಿ ರಾಜಕಾರಣ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರಂಥ ಜ್ಞಾನಿಗಳು ಕೂಡ ಇದನ್ನು ವಿವಾದಾಸ್ಪದ ಮಾಡಿದ್ದು ಅಚ್ಚರಿ ಮೂಡಿಸಿದೆ. ರೈತರು, ಗ್ರಾಹಕರ ಹಿತದೃಷ್ಟಿ ಯಿಂದ ರಾಜಕೀಯ ಬಿಡಿ.  ಕೆಎಂಎಫ್‌ಗೆ 19 ನಿರ್ದೇಶಕರಿದ್ದೇವೆ. ಇದರಲ್ಲಿ ಕಾಂಗ್ರೆಸ್‌– ಜೆಡಿಎಸ್‌ನವರೂ ಇದ್ದಾರೆ. ಈ ನಿರ್ದೇಶಕ ಮಂಡಳಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ. ಒಂದೊಮ್ಮೆ ಕೇಂದ್ರ ಸರ್ಕಾರ ವಿಲೀನಕ್ಕೆ ಮುಂದಾದರೂ ಖುದ್ದಾಗಿ ನಾನೇ ವಿರೋಧ ಮಾಡುತ್ತೇನೆ. ರಾಜ್ಯದ ರೈತರ ಜತೆಗೆ ನಿಲ್ಲುತ್ತೇನೆ ಎಂದು ಹೇಳಿದರು.

‘ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರಪ್ರದೇಶ ಸೇರಿದಂತೆ ಹಲವು ಕಡೆ ಹಾಲು ಒಕ್ಕೂಟಗಳು ನಾಶವಾಗಿವೆ. ಅತ್ಯಂತ ಸುಭದ್ರವಾಗಿರುವುದು ಅಮೂಲ್‌ ಮತ್ತು ಕೆಎಂಎಫ್‌ ಮಾತ್ರ. ಅಮೂಲ್‌ ಕೂಡ ಸಹಕಾರ ಸಂಸ್ಥೆಯಾಗಿದ್ದು, ರೈತರ ಹಿತ ಕಾಪಾಡುತ್ತದೆ. ಅದನ್ನು ವಿರೋಧಿಸುವ ಅಗತ್ಯವಿಲ್ಲ. ಪ್ರತಿ ವರ್ಷ ಇಂಧನ ಇಲಾಖೆಗೆ ವಿದ್ಯುತ್ ಬಿಲ್‌ಗಾಗಿ 120 ಕೋಟಿ ರೂ ಸಂದಾಯ ಮಾಡಲಾಗುತ್ತಿದೆ. ಸೌರ ಘಟಕ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದು, ಇದರಿಂದ ವಾರ್ಷಿಕ 40 ಕೋಟಿ ಉಳಿತಾಯವಾಗಲಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com