
ಬೆಂಗಳೂರು: ಟ್ರಾಫಿಕ್ ಸಮಸ್ಯೆಗಳು ಮತ್ತು ಕಳಪೆ ಮೂಲಸೌಕರ್ಯ ವ್ಯವಸ್ಥೆಯಿಂದಾಗಿ ಬೆಂಗಳೂರು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇಲ್ಲಿ ದಿನನಿತ್ಯ ಪ್ರಯಾಣಿಸುವ ನಾಗರಿಕರು ನಿರಂತರವಾಗಿ ಟ್ರಾಫಿಕ್ ಜಾಮ್ ಮತ್ತು ಅಗೆದ ರಸ್ತೆಗಳೊಂದಿಗೆ ವ್ಯವಹರಿಸುವುದೇ ದೊಡ್ಡ ಸವಾಲು. ಇದೆಲ್ಲದರ ನಡುವೆ, ಬೈಯಪ್ಪನಹಳ್ಳಿಯಲ್ಲಿ ನಡೆದ ಘಟನೆಯೊಂದು ಮೆಚ್ಚುಗೆಗೆ ಪಾತ್ರವಾಗಿದೆ.
ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಶಿವಾನಂದ ಅವರು ಕಾಮಗಾರಿ ನಡೆಯುತ್ತಿದ್ದ ಬೈಯಪ್ಪನಹಳ್ಳಿ ಎಕ್ಸ್‌ಟೆನ್ಶನ್ ರಸ್ತೆಯನ್ನು ದಾಟಲು ವಿಶೇಷಚೇತನ ವೈದ್ಯರು ಮತ್ತು ಅವರ ತಾಯಿಗೆ ಮಣ್ಣು ತೆಗೆಯುವ ಯಂತ್ರದ (ಅರ್ಥ್‌ಮೂವರ್) ವ್ಯವಸ್ಥೆ ಮಾಡುವ ಮೂಲಕ ಸಹಾಯ ಮಾಡಿದ್ದಾರೆ.
'ನನಗೆ ಅಂಗವೈಕಲ್ಯ ಇರುವುದರಿಂದ ನಾನು ನನ್ನ ಗಾಲಿಕುರ್ಚಿಯಲ್ಲಿ ಓಡಾಡುತ್ತೇನೆ. ಆದರೆ, ರಸ್ತೆ ಕಾಮಗಾರಿ ವಿಳಂಬದಿಂದಾಗಿ ನನ್ನ ಮನೆಗೆ ನಾನು ಹೋಗಲು ಸಾಧ್ಯವಾಗಲಿಲ್ಲ' ಎಂದು ಅವರು ಹೇಳಿದರು. ಘಟನೆ ಏಪ್ರಿಲ್ 21ರಂದು ಬೆಳಕಿಗೆ ಬಂದಿದ್ದು, ಸ್ಥಳೀಯ ನಾಗರಿಕರು ಇದನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಏನಿದು ಘಟನೆ..?
ಏಪ್ರಿಲ್ 13 ರಂದು ತನ್ನ ಪಾಳಿಯನ್ನು ಮುಗಿಸಿದ ನಂತರ ಚಿನ್ಮಯ ಮಿಷನ್ ಆಸ್ಪತ್ರೆಯ ಅಪಘಾತ ವಿಭಾಗದ ಪ್ರಮುಖ ವೈದ್ಯ ಡಾ. ಮುರಳಿ ಕುಮಾರ್ ಅವರು ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಮನೆಗೆ ತೆರಳಲಾಗದೆ ಸಿಕ್ಕಿಹಾಕಿಕೊಂಡರು. ಈ ವೇಳೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೋಲೀಸರು, ಅವರನ್ನು ಮನೆಗೆ ಕರೆದೊಯ್ಯಲು ಪರ್ಯಾಯ ಮಾರ್ಗ ಕಾಣದೆ ಚಿಂತಿತರಾಗಿದ್ದರು. ಈ ವೇಳೆ ಶಿವಾನಂದ ಅವರು, ಅದೇ ರಸ್ತೆಯ ಇನ್ನೊಂದು ತುದಿಯಲ್ಲಿದ್ದ ಮಣ್ಣು ತೆಗೆಯುವ ಯಂತ್ರವನ್ನು ಸ್ಥಳಕ್ಕೆ ಕರೆಸಿದ್ದಾರೆ. ಬಳಿಕ ಡಾ.ಮುರಳಿ ಅವರನ್ನು ಅರ್ತ್‌ಮೂವರ್‌ನ ಕ್ರೇನ್‌ನಲ್ಲಿ ಕೂರಿಸಿ ಅವರ ಮನೆ ಗೇಟ್‌ನಲ್ಲಿ ಇಳಿಸಲಾಗಿದೆ.
ಡಾ. ಮುರಳಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿ, 'ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಅಭಿವೃದ್ಧಿ ಕೆಲಸಗಳ ಬಗೆಗೆ ನಾಗರಿಕರಿಗೆ ಯಾವುದೇ ತೊಂದರೆ ಇಲ್ಲ ಆದರೆ, ಜನರು ಇದರಿಂದ ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬ ಅಂಶವನ್ನು ಸರ್ಕಾರ ಮತ್ತು ಬಿಬಿಎಂಪಿ ತಿಳಿದುಕೊಳ್ಳಬೇಕು. ನಮ್ಮ ಪ್ರದೇಶದಲ್ಲಿ ಅನೇಕ ಹಿರಿಯ ನಾಗರಿಕರಿದ್ದಾರೆ' ಎಂದರು.
ಕ್ಷಿಪ್ರವಾಗಿ ಸ್ಪಂದಿಸಿದ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. 'ನನಗೆ ಬೇರೆ ಯಾವುದೇ ಸಹಾಯದ ಅಗತ್ಯವಿದೆಯೇ ಎಂದು ತಿಳಿಯಲು ಘಟನೆಯ ನಂತರ ಸಹಾಯವಾಣಿಯು ನನಗೆ ಎರಡು ಬಾರಿ ಕರೆ ಮಾಡಿ ವಿಚಾರಿಸಿದರು' ಎಂದು ಹೇಳಿದರು.
ಶಿವಾನಂದ ಅವರ ಹೆಸರನ್ನು ಬಹುಮಾನಕ್ಕೆ ಶಿಫಾರಸು ಮಾಡುವುದಾಗಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಿಯಮಿತವಾಗಿ, ಇಲಾಖೆಯು ಸಹಾಯವಾಣಿಯ ಮೂಲಕ 20-25 ಕರೆಗಳಿಗೆ ಸಹಾಯಕ್ಕಾಗಿ ಧಾವಿಸಿದೆ.
Advertisement