ಬೆಂಗಳೂರು: ಯುದ್ಧಪೀಡಿತ ಸುಡಾನ್'ನಿಂದ ವಾಪಸ್ಸಾಗುವ ರಾಜ್ಯದ ಜನರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರ ಸ್ವಂತ ಸ್ಥಳಗಳಿಗೆ ಕಳುಹಿಸಲು ಉಚಿತ ಸೇವೆ ನೀಡುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯು ತಿಳಿಸಿದೆ.
ಸಾರಿಗೆ ನಿಗಮವು ಸ್ಥಳಾಂತರಗೊಂಡವರಿಗೆ ಅವರ ಸ್ಥಳಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಲು ಕೆಎಸ್‌ಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಎಸ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ.
ಈವರೆಗೂ 200 ಜನರನ್ನು ಅವರವರ ಊರುಗಳಿಗೆ ತಲುಪಿಸಲಾಗಿದ್ದು, ಸ್ಥಳಾಂತರ ಗೊಂಡವರು ದಾವಣಗೆರೆ, ಮೈಸೂರು, ಶಿವಮೊಗ್ಗ, ಚನ್ನಗಿರಿಗೆ ಸೇರಿದವರಾಗಿದ್ದಾರೆಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.
ಸುಡಾನ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವರನ್ನು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಉಚಿತವಾಗಿ ಅವರ ಊರುಗಳಿಗೆ ಕಳುಹಿಸಲಾಗುವುದು ಎಂದು ಏಪ್ರಿಲ್ 25 ರಂದು ಸಾರಿಗೆ ನಿಗಮವು ತನ್ನ ಅಧಿಕೃತ ಆದೇಶದಲ್ಲಿ ತಿಳಿಸಿದೆ.
Advertisement