ಬೆಂಗಳೂರು: ಯುದ್ಧ ಪೀಡಿತ ಸುಡಾನ್ ರಾಷ್ಟ್ರದಿಂದ ರಾಜ್ಯಕ್ಕೆ ಮರಳುವವರ ಅನುಕೂಲ ಹಾಗೂ ನೆರವಿಗಾಗಿ ಮುಂಬೈ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್ಯ ಸರ್ಕಾರ ಎರಡು ತಂಡಗಳನ್ನು ನಿಯೋಜನೆ ಮಾಡಿದೆ.
ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಅವರು ಮಾತನಾಡಿ, ಮೊದಲ ಬ್ಯಾಚ್ ನಲ್ಲಿ ರಾಜ್ಯಕ್ಕೆ ಸೇರಿದ ಓರ್ವ ವ್ಯಕ್ತಿ ದೆಹಲಿಗೆ ಆಗಮಿಸಿದ್ದು, ಅವರು ಅಲ್ಲಿಯೇ ಉಳಿದುಕೊಂಡಿದ್ದಾರೆ. ಬುಧವಾರ ರಾಜ್ಯದ ಹಲವರು ಭಾರತಕ್ಕೆ ಬರುವ ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಮರಳುವವರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ದೆಹಲಿ ಮತ್ತು ಮುಂಬೈನಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ನಂತರ ಬೆಂಗಳೂರಿಗೆ ಕರೆತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಗರಕ್ಕೆ ಬಂದ ಬಳಿಕವೂ ಅವರ ಆರೋಗ್ಯವನ್ನು ಮತ್ತೊಮ್ಮೆ ತಪಾಸಣೆ ನಡೆಸಲಾಗುತ್ತದೆ. ಬಳಿಕ ಕೆಎಸ್ಆರ್'ಟಿಸಿ ಬಸ್ ನಿಂದ ಅವರವರ ಊರುಗಳಿಗೆ ಕೊಂಡೊಯ್ಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ವರೆಗೂ ಎಷ್ಟು ಬ್ಯಾಚ್ ಗಳಲ್ಲಿ ಭಾರತೀಯರು ದೇಶಕ್ಕೆ ಆಗಮಿಸಿದ್ದಾರೆಂಬ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಜನ್ ಅವರು, ಇದೊಂದು ಪ್ರಕ್ರಿಯೆಯಾಗಿದ್ದು, ವಿದೇಶಾಂಗ ಸಚಿವಾಲಯವು ಸಂಬಂಂಧ ಪಟ್ಟಂತಹ ರಾಜ್ಯಗಳಿಗೆ ಮಾಹಿತಿ ನೀಡುತ್ತದೆ ಎಂದರು.
Advertisement