ರಾಜ್ಯ ವಿಧಾನಸಭೆ ಕಲಾಪ ಡಿಜಿಟಲೀಕರಣಕ್ಕೆ ಚಿಂತನೆ: ಯು.ಟಿ.ಖಾದರ್

ರಾಜ್ಯದಲ್ಲೂ ವಿಧಾನಸಭಾ ಕಲಾಪವನ್ನು ಡಿಜಿಟಲೀಕರಣಗೊಳಿಸಿ ಕಾಗದರಹಿತ ಸದನವಾಗಿ ಪರಿವರ್ತಿಸುವ ಚಿಂತನೆ ಹೊಂದಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗು ಮಾತುಕತೆ ನಡೆಸಲಾಗಿದೆ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಸೋಮವಾರ ಹೇಳಿದರು.
ಪತ್ರಿಕಾ ಭವನದಲ್ಲಿ ಮಾತನಾಡುತ್ತಿರುವ ಯುಟಿ ಖಾದರ್.
ಪತ್ರಿಕಾ ಭವನದಲ್ಲಿ ಮಾತನಾಡುತ್ತಿರುವ ಯುಟಿ ಖಾದರ್.

ಮಂಗಳೂರು: ರಾಜ್ಯದಲ್ಲೂ ವಿಧಾನಸಭಾ ಕಲಾಪವನ್ನು ಡಿಜಿಟಲೀಕರಣಗೊಳಿಸಿ ಕಾಗದರಹಿತ ಸದನವಾಗಿ ಪರಿವರ್ತಿಸುವ ಚಿಂತನೆ ಹೊಂದಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗು ಮಾತುಕತೆ ನಡೆಸಲಾಗಿದೆ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಸೋಮವಾರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿ ಕೊಂಡಿದ್ದ ಮಾಧ್ಯಮ ಸಂವಾದ ಗೋಷ್ಠಿಯನ್ನುದ್ದೇಶಿಸಿ ಯುಟಿ ಖಾದರ್ ಅವರು ಮಾತನಾಡಿದರು.

ವ್ಯಕ್ತಿಯೊಬ್ಬ ವಿಧಾನಸೌಧ ಪ್ರವೇಶಿಸಿ, ಶಾಸಕರ ಸ್ಥಾನದಲ್ಲಿ ಕುಳಿತ ಘಟನೆ ಬಳಿಕ ಭದ್ರತಾ ವ್ಯವಸ್ಥೆ ಕುರಿತು ಎಚ್ಚೆತ್ತುಕೊಳ್ಳುವಂತೆ ಮಾಡಿದ. ಸದನದೊಳಗೆ ಇದೀಗ ಅತ್ಯುತ್ತಮ ಭದ್ರತಾ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ವಿಧಾನಸೌಧದ ಆವರಣದಲ್ಲಿ ಭದ್ರತೆ ಬಲಪಡಿಸುವ ಕುರಿತು ತಜ್ಞರು ಹಾಗೂ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆಂದು ಹೇಳಿದರು.

ವಿಧಾನಸಭಾ ಕಲಾಪವನ್ನು ಡಿಜಿಟಲೀಕರಣಗೊಳಿಸುವ ಯೋಜನೆ ಈಗಾಗಲೇ ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಅನುಷ್ಠಾನಗೊಂಡಿದೆ. ರಾಜ್ಯದಲ್ಲೂ ಇದನ್ನು ಜಾರಿಗೊಳಿಸುವುದರಿಂದ ಸದನದ ಕಲಾಪವನ್ನು ಸಾರ್ವಜನಿಕರು ವೀಕ್ಷಿಸಿ ಸಮಸ್ಯೆ ತಿಳಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಮಣಿಪುರ ಹಾಗೂ ಉಡುಪಿ ಘಟನೆ ಕುರಿತ ಪ್ರಶ್ನೆಗೆ ಉತ್ತರಿಸಿ, ಶಾಂತಿಯುತ ವಾತಾವರಣ ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಸಮಸ್ಯೆ ಸೃಷ್ಟಿಸುವವರಾಗಬಾರದು. ನಾವು ಅದನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳ್ಳಬೇಕಾದರೆ ವಿಧಾನಸಭಾ ಕಲಾಪಗಳು ಪರಿಣಾಮಕಾರಿಯಾಗಬೇಕು. ಆಗ ಉತ್ತಮ ಶಾಸನಗಳು ಜಾರಿಯಾಗಬಹುದು. ಸರ್ಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ವಿಪಕ್ಷಗಳು ಕಲಾಪದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಪೀಕರ್ ಪಾತ್ರವೂ ಮಹತ್ವದ್ದಾಗಿದೆ. ವಿಧಾನಸಭಾ ಕಲಾಪ ವ್ಯರ್ಥವಾಗದಂತೆ ನಿಭಾಯಿಸುವ ಹೊಣೆಗಾರಿಕೆ ಇದೆ ಎಂದು ತಿಳಿಸಿದರು.

ಶಾಸಕರ ಅಮಾನತು ವಿಚಾರ ಕುರಿತ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದಾಗ ಸ್ಪೀಕರ್ ಆಗಿ ನಾನು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಇದು ಪಕ್ಷಪಾತಿ ಕ್ರಮವಲ್ಲ. ಶಾಸಕರ ಘನತೆ ಕಾಪಾಡಲು ನನ್ನ ಸಂಪೂರ್ಣ ಬೆಂಬಲವಿದೆ. ಸದನದಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಈ ನಡುವೆ ಕಲಾಪವನ್ನು ನಿರ್ದಿಷ್ಟ ಗುರಿಯತ್ತ ತಲುಪಿಸುವ ಗುರಿ ಸ್ಪೀಕರ್ ಮೇಲಿರುತ್ತದೆ, ಮಸೂದೆಯ ಬಗ್ಗೆ ಉತ್ತಮ ರೀತಿಯ ಚರ್ಚೆ ನಡೆದು, ಅದು ಕಾನೂನು ಆಗಿ ಜಾರಿಯಾದರೆ ಪ್ರಜೆಗಳಿಗೆ ಅನುಕೂಲವಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com