ಆಗಸ್ಟ್‌ 4 ರಿಂದ 15ರವರೆಗೆ ಲಾಲ್ ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ!

ಈ ಬಾರಿ ಸ್ವಾತಂತ್ರೋತ್ಸವದ ಅಂಗವಾಗಿ ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ಸಸ್ಯಕಾಶಿ ಲಾಲ್ ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಗಸ್ಟ್ 4 ರಿಂದ 15 ರವರೆಗೆ ನಡೆಯಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಮಂಗಳವಾರ ಹೇಳಿದರು.
ಗಾಜಿನ ಮನೆ ಸಜ್ಜುಗೊಳಿಸುತ್ತಿರುವ ತೋಟಗಾರಿಕಾ ಇಲಾಖೆಯ ಸಿಬ್ಬಂದಿ.
ಗಾಜಿನ ಮನೆ ಸಜ್ಜುಗೊಳಿಸುತ್ತಿರುವ ತೋಟಗಾರಿಕಾ ಇಲಾಖೆಯ ಸಿಬ್ಬಂದಿ.

ಬೆಂಗಳೂರು: ಈ ಬಾರಿ ಸ್ವಾತಂತ್ರೋತ್ಸವದ ಅಂಗವಾಗಿ ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ಸಸ್ಯಕಾಶಿ ಲಾಲ್ ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಗಸ್ಟ್ 4 ರಿಂದ 15 ರವರೆಗೆ ನಡೆಯಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಮಂಗಳವಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 214ನೇ ಫಲ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ವಿಶೇಷವಾಗಿ ಕೆಂಗಲ್ ಹನುಮಂತಯ್ಯನವರ ಹಿರಿಮೆಯನ್ನು ಮತ್ತು ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಫಲಪುಷ್ಪ ಪ್ರದರ್ಶನಕ್ಕೆ ಸುಮಾರು ಎರಡು ಕೋಟಿಯಷ್ಟು ವೆಚ್ಚ ಮಾಡಲಾಗುತ್ತಿದ್ದು, ಫಲಪುಷ್ಪ ಪ್ರದರ್ಶನವನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆಂದು ಹೇಳಿದರು.

ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚು ವೀಕ್ಷಕರು ಆಗಮಿಸುವ ನಿರೀಕ್ಷೆ ಇದೆ. ವಿಧಾನಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯನವರ 4 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಬೃಹತ್ ಹೂವಿನ ಪ್ರತಿಮೆ ವಿಶೇಷ ಆಕರ್ಷಣೆಯಾಗಿರಲಿದೆ. ಉಳಿದಂತೆ ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅವರು ನಿರ್ಮಿಸಿದ ವಿಧಾನಸೌಧದ ಮತ್ತು ಶಿವಪುರ ಸತ್ಯಾಗ್ರಹಸೌಧದ ಪುಷ್ಪ ಮಾದರಿ ಜನರನ್ನು ಆಕರ್ಷಿಸಲಿವೆ.

ರೈಲ್ವೇ ಸಚಿವರಾಗಿ ಕೆಂಗಲ್ ಹನುಮಂತಯ್ಯನವರ ಕೊಡುಗೆಗಳನ್ನು ನೆನಪಿಸುವ ಸಲುವಾಗಿ ವರ್ಟಿಕಲ್ ಗಾರ್ಡನ್ ಪರಿಕಲ್ಪನೆಯಲ್ಲಿ ಪುಷ್ಪಗಳಿಂದ ಸಜ್ಜಾದ ರೈಲು ಕೂಡ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ ಎಂದು ಮಾಹಿತಿ ನೀಡಿದರು.

ಲಕ್ಷಾಂತರ ಎಕ್ಸೋಟಿಕ್ ಆರ್ಕಿಡ್ಸ್, ಬರ್ಡ್ ಆಫ್ ಪ್ಯಾರಡೈಸ್ , ಬ್ರೋಮಿಲಿಯಾಡ್ಸ್, ಆಂಥೂರಿಯಂ, ಹತ್ತಾರು ಬಗೆಯ ವಾರ್ಷಿಕ ಹೂಗಳು ವಿವಿಧ ಪೊಲೀಸ್ ಜಾತಿಯ ಗಿಡಗಳನ್ನು ಬಳಸಿ ಇಂದು ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿ ಕೆಂಗಲ್ ಹನುಮಂತಯ್ಯ ನವರ ಪುತ್ತಳಿಯನ್ನು ವಿನ್ಯಾಸ ಮಾಡಿದೆ.

18 ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯನ್ನು ಕಬ್ಬಿಣ ಮೆಷ್ ಮೊದಲಾದ ವಸ್ತುಗಳನ್ನು ಬಳಸಿ ಕೆಂಪು, ಪೀಚ್, ಹಳದಿ, ರಸ್ಟ್, ಆರೆಂಜ್ ಮತ್ತು ಶ್ವೇತ ವರ್ಣದ ಡಚ್ ಗುಲಾಬಿ ಹೂಗಳು ಪಿಂಚ್ದ ಕೆಂಪು ಗುಲಾಬಿ ಶ್ವೇತ ವರ್ಣದ ಸೇವಂತಿಗೆ ಹೂಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ.

ಇನ್ನು ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಯಲ್ಲಿ 17 ಅಡಿ ಸುತ್ತಳತೆ ಮತ್ತು 24 ಅಡಿ ಎತ್ತರದ ಧ್ವಜ ಸತ್ಯಾಗ್ರಹದ ಪುಷ್ಪ ಮಾದರಿಗೆ ಬಗೆ ಬಗೆಯ ಸೇವಂತಿಗೆ ಹೂಗಳನ್ನು ಬಳಸಲಾಗುತ್ತಿದೆ. 2200 ಚದುರ ಅಡಿಯ ಕಣ್ಮನ ಸೆರೆಯುವ ಮೆಗಾ ಯುರೋಪಿಯನ್ ಫ್ಲೋರಲ್ ಕಾರ್ಪೆಟ್ ಪ್ರದರ್ಶನದ ಕೇಂದ್ರಬಿಂದು ಆಗಲಿದೆ ಎಂದು ತಿಳಿಸಿದರು.

ಕೋಲಾರ ಚಿನ್ನದ ಗಣಿಯ ರಾಷ್ಟ್ರೀಕರಣವನ್ನು ನೆನೆಯುವ ಕಲಾಕೃತಿ, ಹತ್ತು ಆಕರ್ಷಕ ಹೂವಿನ ಪಿರಮಿಡ್ ಗಳ ತುದಿಯಲ್ಲಿ ಕೆಂಗಲ್ ಹನುಮಂತಯ್ಯ ನವರ ಚಿತ್ರ ಸಂಯೋಜನೆ, ಗಾಜಿನ ಮನೆಯ ಒಳಾವರಣದಲ್ಲಿ ಹನುಮಂತಯ್ಯನವರ ವಿಶೇಷ ಛಾಯಾಚಿತ್ರ ಮಾಹಿತಿ- ಪ್ರದರ್ಶನ, ಕಂಬಗಳಲ್ಲಿ ಅರಳುವ ಪುಷ್ಪ ಧೂಮಗಳು ಶೀತ ವಲಯದ ಹೂಗಳ ಪ್ರದರ್ಶನ ದಾರದಲ್ಲಿ ಅರಳುವ ಕೆಂಗಲ್ ಹನುಮಂತನ ಅವರ ಮುಖಭಾವ ಮತ್ತು ವಿಧಾನಸೌಧದ ಕಲಾಕೃತಿ, ಫರ್ನರಿಯ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲಾ ನಾಲ್ಕು ದ್ವಾರಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ವಿರಲಿದ್ದು, ಫಲಪುಷ್ಪ ಪ್ರದರ್ಶನವು ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಇರಲಿದೆ. ವಾರದ ದಿನಗಳಲ್ಲಿ 70 ರೂಪಾಯಿ ಮತ್ತು ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ರಜಾ ದಿನಗಳಲ್ಲಿ 80 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 12 ವರ್ಷದ ಕೆಳಗಿನ ಮಕ್ಕಳಿಗೆ 30 ರೂಪಾಯಿ ಪ್ರವೇಶ ಶುಲ್ಕವಿರಲಿದೆ. ಶಾಲಾ ಉಡುಗೆಯಲ್ಲಿ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.

ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ, ಜೆಸಿ ರಸ್ತೆ ಬಿಬಿಎಂಪಿ ಸಂಕೀರ್ಣ ಮತ್ತು ಲಾಲ್ ಬಾಗ್ ರಸ್ತೆಯ ಅಲ್ ಅಮೀನ್ ಕಾಲೇಜಿನಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಭದ್ರತೆಗಾಗಿ, ಎಲ್ಲಾ ಗೇಟ್‌ಗಳಿಗೆ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗುವುದು ಮತ್ತು ಭದ್ರತಾ ಸಿಬ್ಬಂದಿ ಬ್ಯಾಗೇಜ್ ಅನ್ನು ಸ್ಕ್ಯಾನ್ ಮಾಡುತ್ತಾರೆ. ಆರೋಗ್ಯ ತುರ್ತು ಪರಿಸ್ಥಿತಿಗಳಿಗಾಗಿ, ಆಂಬ್ಯುಲೆನ್ಸ್‌ಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇದಲ್ಲದೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com