ಮಾಧ್ಯಮಗಳು ಮಾನಹಾನಿಕರ ಭಾಷೆ ಬಳಕೆ ಮಾಡಬಾರದು: ಹೈಕೋರ್ಟ್

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮವನ್ನು ನಿರ್ವಹಿಸುವ ಜವಾಬ್ದಾರಿಯುತ ವ್ಯಕ್ತಿಗಳು ಸುದ್ದಿ ಪ್ರಸ್ತುತಪಡಿಸುವಾಗ ಅನುಚಿತ ಅಥವಾ ಮಾನಹಾನಿಕರ ಭಾಷೆ ಬಳಕೆ ಮಾಡಬಾರದು ಎಂದು ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ನಿರ್ದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮವನ್ನು ನಿರ್ವಹಿಸುವ ಜವಾಬ್ದಾರಿಯುತ ವ್ಯಕ್ತಿಗಳು ಸುದ್ದಿ ಪ್ರಸ್ತುತಪಡಿಸುವಾಗ ಅನುಚಿತ ಅಥವಾ ಮಾನಹಾನಿಕರ ಭಾಷೆ ಬಳಕೆ ಮಾಡಬಾರದು ಎಂದು ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ನಿರ್ದೇಶಿಸಿದೆ.

ವಕೀಲ ಸಮುದಾಯವನ್ನು ತುಚ್ಛವಾಗಿ ಬಿಂಬಿಸಿದ ಆರೋಪದ ಮೇಲೆ ಲೋಕ ಶಿಕ್ಷಣ ಟ್ರಸ್ಟ್‌, ಸಂಯುಕ್ತ ಕರ್ನಾಟಕ, ಹೊಸ ದಿಗಂತ, ನವೋದಯ ಮತ್ತು ಕಿತ್ತೂರು ಕರ್ನಾಟಕ ಪತ್ರಿಕೆಗಳ ವಿರುದ್ದ ದಾಖಲಾಗಿದ್ದ ಕ್ರಿಮಿನಲ್‌ ಪ್ರಕ್ರಿಯೆಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಪ್ರಕರಣವು ಹತ್ತು ವರ್ಷಗಳಿಂದ ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದು, ಒಂದಲ್ಲಾ ಒಂದು ಕಾರಣಕ್ಕಾಗಿ ಅದರ ವಿಚಾರಣೆ ನಡೆಯುತ್ತಿಲ್ಲ. ಅಫಿಡವಿಟ್‌ ಮೂಲಕ ಅರ್ಜಿದಾರ ಮಾಧ್ಯಮಗಳು ವಿಷಾದ ವ್ಯಕ್ತಪಡಿಸಿದ್ದು, ಇದನ್ನು ಒಪ್ಪಿಕೊಂಡು ಅವರ ವಿರುದ್ಧದ ಪ್ರಕ್ರಿಯೆ ವಜಾ ಮಾಡುವುದು ಸೂಕ್ತ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

“ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿಯು ಅಂತಿಮ ಸತ್ಯ ಎಂದು ಸಮಾಜದ ದೊಡ್ಡ ವರ್ಗ ನಂಬುತ್ತದೆ. ಹೀಗಾಗಿ, ವರದಿಯಲ್ಲಿ ಅಸಂದೀಯ ಅಥವಾ ಮಾನಹಾನಿ ಪದ ಬಳಕೆ ಮಾಡುವುದಕ್ಕೂ ಮುನ್ನ ಮಾಧ್ಯಮಗಳು ಎಚ್ಚರಿಕೆ ವಹಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

“ಯಾವುದೇ ಪರಿಶೀಲನೆ ನಡೆಸದೇ ಇಂದಿಗೂ ಸಮಾಜದ ದೊಡ್ಡವರ್ಗವು ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಯು ಅಂತಿಮ ಸತ್ಯ ಎಂದು ನಂಬುತ್ತದೆ. ದೇಶದ ಜನರು ಮಾಧ್ಯಮಗಳ ಮೇಲೆ ಈ ಪರಿಯ ನಂಬಿಕೆ ಇಟ್ಟುಕೊಂಡಿರುವಾಗ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಹೊಣೆ ಹೊತ್ತವರು ವರದಿಗಾರಿಕೆಯಲ್ಲಿ ಅಸಂಸದೀಯ ಅಥವಾ ಮಾನಹಾನಿ ಪದ ಬಳಕೆಯಾಗದಂತೆ ಅತ್ಯಂತ ಎಚ್ಚರಿಕೆ ವಹಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅಲ್ಲದೇ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಸುದ್ದಿಗಳನ್ನು ಅತ್ಯಂತ ಸಂಯಮದಿಂದ ಪ್ರಸ್ತುತಪಡಿಸಬೇಕು. ಕೆಲವು ವರದಿಗಳಲ್ಲಿ ವಕೀಲ ಸಮುದಾಯವನ್ನು ತಾಲಿಬಾನ್‌, ಗೂಂಡಾ, ಪುಂಡಾಟಿಕೆ ಎಂದು ಉಲ್ಲೇಖಿಸಿದ್ದ ಕೆಲವು ಮಾಧ್ಯಮಗಳ ವಿರುದ್ದ ನ್ಯಾಯಾಲಯವು ಅತೃಪ್ತಿ ವ್ಯಕ್ತಪಡಿಸಿದೆ.

“ಮುದ್ರಣ, ವಿದ್ಯುನ್ಮಾನ ಮಾಧ್ಯಮ/ಪತ್ರಕರ್ತರನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಸಂಭೋದಿಸಲಾಗುತ್ತದೆ. ಈ ನೆಲೆಯಲ್ಲಿ ಮಾಧ್ಯಮಗಳು ಅತ್ಯಂತ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಸುದ್ದಿ ಪ್ರಕಟಣೆಯು ವಿಶಾಲ ನೆಲೆಯಲ್ಲಿ ಸಮಾಜದ ಮೇಲೆ ವಿಸ್ತೃತ ಪರಿಣಾಮ ಉಂಟು ಮಾಡುತ್ತದೆ” ಎಂದು ಪೀಠ ಹೇಳಿದೆ.

“ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ವರದಿಗಾರಿಕೆಯ ಮೇಲೆ ನಿಗಾ ಇಡುವುದರ ಜೊತೆಗೆ ಸಂಪಾದಕರು ಅಥವಾ ಪ್ರಧಾನ ಸಂಪಾದಕರು ಈ ಉದ್ದೇಶವನ್ನು ಈಡೇರಿಸಲು ಗಮನ ನೀಡಬೇಕು. ಮಾಧ್ಯಮಗಳು ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾದರೆ ಪರಿಸ್ಥಿತಿ ಅಗತ್ಯಬಿದ್ದರೆ ನ್ಯಾಯಾಲಯಗಳು ತಮ್ಮ ವಿಶೇಷ ಅಧಿಕಾರವನ್ನು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೇಲೆ ಬಳಕೆ ಮಾಡಲು ಇದು ಪ್ರಶಸ್ತ ಕಾಲವಾಗಿದೆ” ಎಂದು ಹೇಳಿದೆ.

ಏನಿದು ಪ್ರಕರಣ?
2012ರಲ್ಲಿ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಮಾಧ್ಯಮ, ವಕೀಲರು ಮತ್ತು ಪೊಲೀಸರ ನಡುವೆ ಸಂಘರ್ಷ ಸಂಭವಿಸಿತ್ತು. ಇದರ ಬೆನ್ನಿಗೇ, ಕ್ರಿಮಿನಲ್‌ ಪ್ರಕರಣ ಎದುರಿಸುವ ಪತ್ರಕರ್ತರನ್ನು ವಕೀಲರು ಪ್ರತಿನಿಧಿಸಬಾರದು ಎಂದು ರಾಜ್ಯದಾದ್ಯಂತ ವಕೀಲರ ಸಂಘಗಳು ನಿರ್ಧಾರ ಕೈಗೊಂಡಿದ್ದವು.

ಈ ವಿಚಾರವು ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿದ್ದು, ಶಾಸಕರೊಬ್ಬರು ವಕೀಲರ ಸಂಘಗಳ ನಿರ್ಧಾರವು ʼತಾಲಿಬಾನ್‌ ಮಾನಸಿಕತೆʼ ಎಂದು ಜರಿದಿದ್ದರು. ಕಲಾಪ ವರದಿ ಮಾಡುವಾಗ ಅಸಂಬಂದ್ಧ ಪದ ಬಳಕೆ ಮಾಡಿದ್ದಾರೆ. ಇಡೀ ವಕೀಲ ಸಮುದಾಯವನ್ನು ʼಗೂಂಡಾ ಮನಸ್ಥಿತಿಯವರುʼ ಎಂದು ಹಣಪಟ್ಟಿ ಹಚ್ಚಿದ್ದಾರೆ ಎಂದು ಆಕೇಪಿಸಿ, ಇಂಥ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ವಕೀಲ ದಾವಲ್‌ಸಾಬ್‌ ನದಾಫ್‌ ಅವರು ಖಾಸಗಿ ದೂರು ದಾಖಲಿಸಿದ್ದರು.

ಪ್ರಕರಣವು ವಿಚಾರಣೆಗೆ ಬಾಕಿ ಇರುವಾಗ ಲೋಕ ಶಿಕ್ಷಣ ಟ್ರಸ್ಟ್‌, ಸಂಯುಕ್ತ ಕರ್ನಾಟಕ, ಹೊಸ ದಿಗಂತ, ನವೋದಯ ಮತ್ತು ಕಿತ್ತೂರು ಕರ್ನಾಟಕ ಪತ್ರಿಕೆಗಳು ವರದಿಗೆ ವಿಷಾದ ವ್ಯಕ್ತಪಡಿಸಿ, ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆ ವಜಾ ಮಾಡುವಂತೆ ಕೋರಿದ್ದವು.

ಅರ್ಜಿದಾರ ಮಾಧ್ಯಮಗಳನ್ನು ಪ್ರತಿನಿಧಿಸಿದ್ದ ವಕೀಲರು “ತಮ್ಮ ಕಕ್ಷಿದಾರರು ವಕೀಲ ಸಮುದಾಯದ ಮಾನಹಾನಿ ಮಾಡುವ ಉದ್ದೇಶ ಹೊಂದಿರಲಿಲ್ಲ” ಎಂದು ವಾದಿಸಿದ್ದರು. ಇದನ್ನು ಮಾನ್ಯ ಮಾಡಿ, ನ್ಯಾಯಾಲಯವು ಪ್ರಕರಣ ರದ್ದುಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com