ಬ್ರ್ಯಾಂಡ್ ಬೆಂಗಳೂರು- ಸ್ವಚ್ಛ ಬೆಂಗಳೂರು: 10 ಸಾವಿರಕ್ಕೂ ಹೆಚ್ಚು ಸಲಹೆ; ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಪೌರಕಾರ್ಮಿಕರ ಆಗ್ರಹ

ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಸಲಹೆ-ಸೂಚನೆಗಳ ಮಹಾಪೂರವೇ ಹರಿದುಬಂದಿದ್ದು, ಸ್ವಚ್ಛ ಬೆಂಗಳೂರು ವಿಭಾಗಕ್ಕೆ 10,000ಕ್ಕೂ ಹೆಚ್ಚು ಸಲಹೆಗಳು ಬಂದಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಸಲಹೆ-ಸೂಚನೆಗಳ ಮಹಾಪೂರವೇ ಹರಿದುಬಂದಿದ್ದು, ಸ್ವಚ್ಛ ಬೆಂಗಳೂರು ವಿಭಾಗಕ್ಕೆ 10,000ಕ್ಕೂ ಹೆಚ್ಚು ಸಲಹೆಗಳು ಬಂದಿವೆ.

ಈ ಪೈಕಿ ಸಲಹೆ ನೀಡಿರುವ ಹಲವು ಪೌರಕಾರ್ಮಿಕರು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವಂತೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಇಲಾಖೆಗೆ ಒತ್ತಾಯಿಸಿದ್ದಾರೆ.

ಜ್ಞಾನಭಾರತಿ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಘನತ್ಯಾಜ್ಯ ನಿರ್ವಹಣೆ ಪಾಲುದಾರ ಸಭೆ’ಯಲ್ಲಿ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಸಹಯೋಗದಲ್ಲಿ ಬೆಂಗಳೂರು ವಿವಿ ಪರಿಸರವಿಜ್ಞಾನ ವಿಭಾಗದವರು ಸಲಹೆಗಳನ್ನು ಬೇರ್ಪಡಿಸಿ ವರದಿ ಸಿದ್ಧಪಡಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ನಾಗರಿಕರಿಂದ ಬಂದಿರುವ ಸಲಹೆಗಳ ಬಗ್ಗೆ ಪರಿಸರವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ವಿಚಾರಸಂಕಿರಣದಲ್ಲಿ ಬಂದ ಸಲಹೆಗಳು ಹಾಗೂ ನಾಗರಿಕರ ಸಲಹೆಗಳನ್ನು ಕ್ರೋಢೀಕರಿಸಿ ಅಧ್ಯಯನ ನಡೆಸಿ ಅಂತಿಮವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.

ಬಿಬಿಎಂಪಿ ಮಾರ್ಷಲ್‌ಗಳು, ಹೆಲ್ತ್ ಇನ್‌ಸ್ಪೆಕ್ಟರ್‌ಗಳು ಮತ್ತು ವಾರ್ಡ್ ಇಂಜಿನಿಯರ್‌ಗಳ ಕೈಗೆ ಸಿಕ್ಕಿಬಿದ್ದಿರುವ ನಿಯಮ ಉಲ್ಲಂಘಿಸಿದವರಿಂದ 6 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿಯ ಎಸ್‌ಡಬ್ಲ್ಯೂಎಂ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ತಿಳಿಸಿದ್ದಾರೆ. ಕೆಲವೆಡೆ ಕಸ ಸುರಿಯುತ್ತಿದ್ದ ಟ್ರ್ಯಾಕ್ಟರ್‌ಗಳನ್ನೂ ವಶಪಡಿಸಿಕೊಂಡಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಪೋರ್ಟಲ್ ಮತ್ತು WhatsApp ನಲ್ಲಿ ಸಲಹೆಗಳನ್ನು ಕಳುಹಿಸಲಾಗಿದೆ. ಸಭೆಯಲ್ಲಿ ಎನ್‌ಜಿಒಗಳು, ಪೌರಕಾರ್ಮಿಕ ಸಂಘಗಳ ಸದಸ್ಯರು, ಗುತ್ತಿಗೆದಾರರು ಮತ್ತು ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದರು. ಸಲಹೆಗಳನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಕಬಾಡೆ ಹೇಳಿದರು.

ರಾಜಧಾನಿಯಲ್ಲಿ ಅಂದಾಜು 1.4 ಕೋಟಿ ಲಕ್ಷ ಜನಸಂಖ್ಯೆಯಿದ್ದು, ನಿತ್ಯ 5,500 ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದೆ. ವೈಜ್ಞಾನಿಕವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡದಿದ್ದಲ್ಲಿ ಮುಂದಿನ 15 ವರ್ಷಗಳಲ್ಲಿ 1.2 ಸಾವಿರ ಮೆ.ಟನ್ ಕಸ ಉತ್ಪತ್ತಿಯಾಗಲಿದೆ. ಆದ್ದರಿಂದ, ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕ, ತ್ಯಾಜ್ಯ ಸಂಸ್ಕರಣಾ ಘಟಕ, ವೇಸ್ಟ್ ಟು ಎನರ್ಜಿ ಘಟಕ ಹಾಗೂ ಬಯೋ ಸಿಎನ್‌ಜಿ ಸಂಸ್ಥೆಯು ಮೂಲದಲ್ಲಿಯೇ ಸಂಸ್ಕರಣೆ ಮಾಡುವುದರಿಂದ ಸಮಸ್ಯೆ ಬಗೆಹರಿಸಬಹುದು. ನಗರದಲ್ಲಿ 18,500 ಪೌರಕಾರ್ಮಿಕರ ಅಗತ್ಯವಿದ್ದು, ಪ್ರಸ್ತುತ 16,000 ಪೌರಕಾರ್ಮಿಕರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಹೆಚ್ಚಿನ ಪೌರಕಾರ್ಮಿಕರ ನೇಮಕದ ಅಗತ್ಯವಿದೆ ಎಂದು ವಿವರಿಸಿದರು.

ಬಿಬಿಎಂಪಿ ಕಸದ ಗುತ್ತಿಗೆದಾರ ವೆಂಕಟೇಶ್ ಸಿಎಸ್ ಮಾತನಾಡಿ, ಏಳು ಸಂಸ್ಕರಣಾ ಘಟಕಗಳ ಪೈಕಿ ಎರಡು ಅಥವಾ ಮೂರು ಘಟಕಗಳು ನಿವಾಸಿಗಳ ಪ್ರತಿಭಟನೆಯಿಂದಾಗಿ ಮುಚ್ಚಲ್ಪಟ್ಟಿವೆ. ಅಧಿಕಾರಿಗಳು ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಾವರಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು' ಎಂದರು.

ಆರ್.ಆರ್.ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯೆ ಶೋಭಾ ಭಟ್ ಅವರು ಮಾತನಾಡಿ, ಶಾಲೆಗಳು ಮತ್ತು ಧಾರ್ಮಿಕ ಸಂಸ್ಥೆಗಳ ಆವರಣದಲ್ಲಿ ಶೂನ್ಯ ತ್ಯಾಜ್ಯವನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com