ಬೆಂಗಳೂರು: ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿಗೆ ಗುಂಡೇಟು

ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಎರಗಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಯೊಬ್ಬನ ಮೇಲೆ ಪೊಲೀಸರ ಗುಂಡು ಹಾರಿಸಿದ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಎರಗಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಯೊಬ್ಬನ ಮೇಲೆ ಪೊಲೀಸರ ಗುಂಡು ಹಾರಿಸಿದ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ಕೊಲೆ ಆರೋಪಿ ಆಕಾಶ್(19) ಕಾಲಿಗೆ ಪೊಲೀಸರ ಗುಂಡು ತಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಳೆದ ಜುಲೈ 31 ರಂದು ಆನೇಕಲ್ ತಾಲ್ಲೂಕಿನ ಮೆಣಸಿಗಾನಹಳ್ಳಿ ಸಮೀಪ ಹೇಮಂತ್‍ಕುಮಾರ್ (24) ಎಂಬ ಯುವಕನನ್ನು 5 ಮಂದಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಕೊಲೆ ಆರೋಪಿ ಒಬ್ಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಆಕಾಶ್ ,ಒಣಕನಹಳ್ಳಿಯ ಪ್ರಗತಿಪುರದ ಪಾಳು ಮನೆಯೊಂದರಲ್ಲಿ ಅಡಗಿ ಕುಳಿತಿದ್ದಾನೆ ಎಂಬ ಮಾಹಿತಿ ನೀಡಿದ. ತಕ್ಷಣ ಆನೇಕಲ್ ಸಬ್‍ಇನ್ಸ್‍ಪೆಕ್ಟರ್ ಪ್ರದೀಪ್‍ಕುಮಾರ್ ಮತ್ತು ಅವರ ತಂಡ ಭಾನುವಾರ ಬೆಳಗ್ಗೆ ಸುಮಾರು 9.45ರಲ್ಲಿ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಲು ಯತ್ನಿಸಿದಾಗ ಆತ ಸಿಬ್ಬಂದಿ ಮಣಿ ಎಂಬುವವರ ಮೇಲೆ ಹಲ್ಲೆ ಮಾಡಿದ.

ಈ ವೇಳೆ ಸಬ್‍ಇನ್ಸ್‍ಪೆಕ್ಟರ್ ಪ್ರದೀಪ್‍ಕುಮಾರ್ ಅವರು ತಮ್ಮ ಪಿಸ್ತೂಲ್‍ನಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರು. ಆದರೂ ಸಹ ಅದನ್ನು ಲೆಕ್ಕಿಸದೆ ಮತ್ತೆ ದಾಳಿಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಸಬ್‍ಇನ್ಸ್‍ಪೆಕ್ಟರ್ ಅವರು ಹಾರಿಸಿದ ಗುಂಡು ಆತನ ಬಲಗಾಲಿಗೆ ತಲುಗಿ ಕುಸಿದುಬಿದ್ದ. ನಂತರ ಸುತ್ತುವರಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂಬಂಧ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಮೂವರು ಕೊಲೆ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com