ದಯಾಮರಣಕ್ಕೆ ಅನುಮತಿ ನೀಡಿ: ರಾಷ್ಟ್ರಪತಿಗಳಿಗೆ ಬಿಬಿಎಂಪಿ ಗುತ್ತಿಗೆದಾರರ ಮನವಿ

ಪಾಲಿಕೆ ಗುತ್ತಿಗೆದಾರರ ಬಿಲ್‌ಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ 675 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು, ಪಾಲಿಕೆ ಹಣ ನೀಡಿದ ಹಿನ್ನೆಲೆಯಲ್ಲಿ ದಯಾಮರಣಕ್ಕೆ ಅನುಮತಿ ನೀಡುವಂತೆ ಸುಮಾರು 500 ಮಂದಿ ಗುತ್ತಿಗೆದಾರರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಾಲಿಕೆ ಗುತ್ತಿಗೆದಾರರ ಬಿಲ್‌ಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ 675 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು, ಪಾಲಿಕೆ ಹಣ ನೀಡಿದ ಹಿನ್ನೆಲೆಯಲ್ಲಿ ದಯಾಮರಣಕ್ಕೆ ಅನುಮತಿ ನೀಡುವಂತೆ ಸುಮಾರು 500 ಮಂದಿ ಗುತ್ತಿಗೆದಾರರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಅವರು, ‘2023-24ನೇ ಸಾಲಿನಲ್ಲಿ ಬಿಬಿಎಂಪಿ ಬಳಿ ರೂ.2 ಸಾವಿರ ಕೋಟಿ ತೆರಿಗೆ ಮೊತ್ತ ಮತ್ತು ಸರ್ಕಾರ ನೀಡಿರುವ ರೂ.675 ಕೋಟಿ ಅನುದಾನವಿದ್ದರೂ 26 ತಿಂಗಳಿಂದ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳಿಗೆ ಹಣ ಪಾವತಿಸುತ್ತಿಲ್ಲ ಎಂದು ಆರೋಪಿಸಿದರು.

‘ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳಿಗೆ ಸಕಾಲದಲ್ಲಿ ಬಿಲ್‌ ಪಾವತಿಯಾಗದೇ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೆಲವರು ದಯಾಮರಣ ಕೋರಿ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಬಿಬಿಎಂಪಿ ಮುಖ್ಯಆಯುಕ್ತ ತುಷಾರ್ ಗಿರಿನಾಥ್‌ ಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದು, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಲ್‌ ಪಾವತಿಸಲು ಒತ್ತಾಯಿಸಿದರೆ ತನಿಖೆ ಕೈಗೊಳ್ಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ, ಸೋಮವಾರದಿಂದಲೇ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಬಿಎಂಪಿಯಲ್ಲಿ ಹಣದ ಲಭ್ಯತೆ ಇದ್ದರೂ ಬಿಡುಗಡೆ ಮಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ನಮ್ಮ ಸಂಘ ಗುತ್ತಿಗೆದಾರರಿಂದ ಹೇಳಿಕೆಗಳು ಹಾಗೂ ವೀಡಿಯೋ ಸಂದೇಶಗಳನ್ನು ಸಂಗ್ರಹಿಸುತ್ತಿದ್ದು, ಇವುಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸದಿದ್ದಲ್ಲಿ ಉಗ್ರ ಹೋರಾಟವನ್ನೂ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸರಕಾರ ಈ ಹಿಂದೆ 675 ಕೋಟಿ ರೂ. ಬಿಡುಗಡೆಗೆ ಆದೇಶ ನೀಡಿದ್ದ ಸಂದರ್ಭದಲ್ಲಿ ಈಗ ಸಲ್ಲಿಕೆಯಾಗಿರುವ ಕಾಮಗಾರಿಗಳು ಮತ್ತು ಬಿಲ್‌ಗಳ ಲೆಕ್ಕಪರಿಶೋಧನೆಗಾಗಿ ಸಮಿತಿಯನ್ನು ರಚಿಸಿದೆ. ಇದರಿಂದಾಗಿ ಪಾವತಿ ವಿಳಂಬವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ 2019 ರಿಂದ 2022 ರವರೆಗಿನ ಕಾಮಗಾರಿಗಳಿಗೆ ಪಾವತಿ ಮಾಡುವ ಮೊದಲು, ಎಲ್ಲಾ ಕಾಮಗಾರಿಗಳು ಮತ್ತು ಬಿಲ್‌ಗಳ ಲೆಕ್ಕಪರಿಶೋಧನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಸರ್ಕಾರದ ಈ ನಡೆ ಗುತ್ತಿಗೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com