ಶಾಸಕರು ವರ್ಸಸ್ ಸಚಿವರು: ಅಸಮಾಧಾನ ಶಮನಕ್ಕೆ 2ನೇ ದಿನವೂ ಕಾಂಗ್ರೆಸ್ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ

ಶಾಸಕರು ಮತ್ತು ಸಚಿವರ ಮುನಿಸಿಗೆ ಸಂಬಂಧಿಸಿದಂತೆ ಸತತ 2ನೇ ದಿನವೂ ಅಂದರೆ ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆವರೆಗೂ ಸಿಎಂ ಸಿದ್ದರಾಮಯ್ಯ(Siddaramaiah) ಸರಣಿ ಸಭೆ ನಡೆಸಿದ್ದಾರೆ. 
ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ
ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ
Updated on

ಬೆಂಗಳೂರು: ಶಾಸಕರು ಮತ್ತು ಸಚಿವರ ಮುನಿಸಿಗೆ ಸಂಬಂಧಿಸಿದಂತೆ ಸತತ 2ನೇ ದಿನವೂ ಅಂದರೆ ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆವರೆಗೂ ಸಿಎಂ ಸಿದ್ದರಾಮಯ್ಯ(Siddaramaiah) ಸರಣಿ ಸಭೆ ನಡೆಸಿದ್ದಾರೆ. 

ತಮ್ಮ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳು ಮತ್ತು ಸರ್ಕಾರ ಮತ್ತು ಅದರ ಸಚಿವರ ಕಾರ್ಯವೈಖರಿ ಬಗ್ಗೆ ಆಡಳಿತ ಪಕ್ಷದೊಳಗೆ ಅಸಮಾಧಾನದ ವರದಿಗಳ ನಡುವೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರು ಜಿಲ್ಲೆಗಳ ಕಾಂಗ್ರೆಸ್ ಶಾಸಕರೊಂದಿಗೆ ಮಂಗಳವಾರ ಚರ್ಚೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆ ಸತತ ಎರಡನೇ ದಿನವೂ ಮುಂದುವರೆಯಿತು. ಇಂದು ರಾಯಚೂರು, ವಿಜಯಪುರ, ಕೊಪ್ಪಳ, ಬೆಳಗಾವಿ, ಹಾವೇರಿ ಮತ್ತು ಕಲಬುರಗಿ ಜಿಲ್ಲೆಗಳ ಶಾಸಕರ ಜತೆ ಸಿಎಂ ಪ್ರತ್ಯೇಕವಾಗಿ ಸಭೆ ನಡೆಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಸಚಿವರು ಮತ್ತು ಜಿಲ್ಲೆಗಳ ಶಾಸಕರೊಂದಿಗೆ ಚರ್ಚೆ ನಡೆಸಿದರು. ಆಯಾ ಕ್ಷೇತ್ರಗಳ ಅಭಿವೃದ್ಧಿ, ಅನುದಾನ, ಲೋಕಸಭೆ ಚುನಾವಣೆಗೆ ಸಿದ್ಧತೆ ಕುರಿತು ಚರ್ಚೆ ನಡೆಸಿದರು. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉಪಸ್ಥಿತರಿದ್ದರು ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಧಿಕೃತ ಮತ್ತು ಪಕ್ಷದ ಮೂಲಗಳ ಪ್ರಕಾರ, ಶಾಸಕರು ತಮ್ಮ ಕ್ಷೇತ್ರಗಳಿಗೆ ಹಣ ಹಂಚಿಕೆ ಮತ್ತು ಚುನಾವಣೆಗೆ ಮುನ್ನ ಸ್ಥಳೀಯವಾಗಿ ಜನರಿಗೆ ನೀಡಿದ ಐದು ಭರವಸೆಗಳನ್ನು ಹೊರತುಪಡಿಸಿ ಇತರೆ ಭರವಸೆಗಳನ್ನು ಈಡೇರಿಸುವ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದರು. ಐದು ಗ್ಯಾರಂಟಿ ಯೋಜನೆಗಳ (ಚುನಾವಣೆ ಭರವಸೆಗಳು) ಅನುಷ್ಠಾನ ಮತ್ತು ಈ ವರ್ಷ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಮೇಲೆ ಆರ್ಥಿಕ ಪರಿಣಾಮಗಳ ಬಗ್ಗೆ ಸಿಎಂ ಶಾಸಕರಿಗೆ ವಿವರಿಸಿದರು ಎಂದು ಹೇಳಲಾಗಿದೆ. ಆದರೆ, ಆದ್ಯತೆ ಮೇರೆಗೆ ಆಗಬೇಕಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ 6 ಜಿಲ್ಲೆಗಳ ಜೊತೆ ಸಭೆ(Meeting) ನಡೆಸಲಾಗಿತ್ತು. ಯಾದಗಿರಿ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ಧಾರವಾಡ ಜಿಲ್ಲೆ ವ್ಯಾಪ್ತಿಯ ಸಚಿವರು, ಶಾಸಕರ(MLAs) ಜೊತೆ ನಿನ್ನೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಶಾಸಕರುಗಳ ದೂರು ಆಲಿಸಿದ ಸಿಎಂ ಸಿದ್ದರಾಮಯ್ಯ, ಆಯಾ ಜಿಲ್ಲಾ ವ್ಯಾಪ್ತಿಯ ಸಚಿವರು, ಉಸ್ತುವಾರಿ ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಅಂತೆಯೇ ಕ್ಷೇತ್ರಗಳಿಗೆ ಶಾಸಕರ ಅನುದಾನದ ಬೇಡಿಕೆಗೂ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಶಾಸಕರಿಗೆ ಅಭಿಪ್ರಾಯ ಹೇಳಿಕೊಳ್ಳಲು ಮುಕ್ತ ಅವಕಾಶವನ್ನು ಸಿಎಂ ನೀಡಿದ್ದು, ವರ್ಗಾವಣೆ ವಿಚಾರ, ಲೋಕಸಭೆ ತಯಾರಿ, ಸಮನ್ವಯತೆ ಚರ್ಚೆ, ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆ, ಪರಿಹಾರದ ಕುರಿತು ಚರ್ಚೆ ನಡೆಸಲಾಗಿದೆ. 

ಆಡಳಿತ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದ್ದು, 30ಕ್ಕೂ ಹೆಚ್ಚು ಶಾಸಕರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ನಾಯಕತ್ವಕ್ಕೆ ಪತ್ರ ಬರೆದು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗದಿರುವುದು ಹಾಗೂ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹಲವಾರು ಶಾಸಕರು ಅಸಮಾಧಾನಗೊಂಡಿದ್ದು, ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಾವು ವಿನಂತಿಸಿದಂತೆ (ಸರ್ಕಾರಿ ನೌಕರರ) ವರ್ಗಾವಣೆಯನ್ನು ನೀಡಿಲ್ಲ. ತಮಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಕೆಲವು ಸಚಿವರ ಬಗ್ಗೆ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ದೂರಿದ್ದಾರೆ.

ಕಳೆದ ತಿಂಗಳು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಅಸಮಾಧಾನದ ದೃಶ್ಯಗಳಿಗೆ ಸಾಕ್ಷಿಯಾಗಿತ್ತು. ಹಿರಿಯ ಶಾಸಕ ಬಿ ಆರ್ ಪಾಟೀಲ್ ಅವರು "ಸ್ವಾಭಿಮಾನ" ಪ್ರಶ್ನೆ ಬಂದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು. ಕೆಲವು ಸಚಿವರ ವರ್ತನೆ ಮತ್ತು ನಡತೆ ಕೆಲ ಶಾಸಕರಲ್ಲಿ ಅಸಮಾಧಾನ ಮೂಡಿಸಿದೆ, ಇದನ್ನು ಸರಿಪಡಿಸದಿದ್ದರೆ ಹೋರಾಟ ಮುಂದುವರಿಸುವುದಾಗಿ ಪಾಟೀಲ್ ಎಚ್ಚರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com