
ಬೆಂಗಳೂರು: ನಗರದ ಸುಧಾರಣೆಗೆ ಪರಿಣಾಮಕಾರಿ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು ಎಂದು ಪಾಲಿಕೆಯ ಅರಣ್ಯ ವಿಭಾಗದ ವಿಶೇಷ ಆಯುಕ್ತೆ ಹಾಗೂ ಹಸಿರು ಬೆಂಗಳೂರಿನ ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರು ಹೇಳಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಹಸಿರು/ಪರಿಸರ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಆರ್ ವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರವನ್ನು ಹಸಿರು ಬೆಂಗಳೂರನ್ನಾಗಿಸುವ ಉದ್ದೇಶದಿಂದ ಬ್ರ್ಯಾಂಡ್ ಬೆಂಗಳೂರಿನಲ್ಲಿ 7 ವಿವಿಧ ವಿಷಯಗಳಡಿ ಬರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದರಂತೆ ಮುಂದಿನ 25-30 ವರ್ಷಗಳಲ್ಲಿ ಸಂಪೂರ್ಣ ಬೆಂಗಳೂರನ್ನು ಹಸಿರುಮಯವಾಗಿಸಬೇಕು. ಈ ಸಂಬಂಧ ನಾಗರಿಕರಿಂದ ಬಂದಂತಹ ಸಲಹೆಗಳನ್ನೆಲ್ಲಾ ಅಧ್ಯಯನ ನಡೆಸಿ ಕ್ರೋಢೀಕರಿಸಿ ಉತ್ತಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಬಿಬಿಎಂಪಿ ಈಗಾಗಲೇ ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ನೀಡಿದೆ. ಸಸಿಗಳಿಗೆ ಶಾಶ್ವತವಾಗಿ ವಿದ್ಯಾರ್ಥಿಗಳ ಹೆಸರಿಡುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅನೇಕ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು, ನಾಗರಿಕ ಮತ್ತು ಪರಿಸರ ಕಾರ್ಯಕರ್ತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದರು.
ಫ್ರೆಂಡ್ಸ್ ಆಫ್ ಲೇಕ್ ಸಹ ಸಂಸ್ಥಾಪಕ ರಾಮ್ ಪ್ರಸಾದ್ ಮಾತನಾಡಿ, ''ನಗರದ ಸಾರ್ವಜನಿಕ ಹಾಗೂ ಖಾಸಗಿ ಭೂಮಿಗಳಲ್ಲಿ ಸಸಿ ನೆಡುವುದು, ಕೆರೆಗಳಿಗೆ ಕಲುಷಿತ ನೀರು ಸೇರದಂತೆ ತಡೆಯುವುದು, ಶೇ.100ರಷ್ಟು ತ್ಯಾಜ್ಯ ನೀರು ಸಂಸ್ಕರಣೆ, ಶುದ್ಧೀಕರಣ ಘಟಕಗಳ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಬೇಕು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅರಣ್ಯ ಸಂಪತ್ತನ್ನು ಸಂರಕ್ಷಿಸುವುದು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿಗಳ ನಿರ್ಮಾಣವನ್ನು ಕಡ್ಡಾಯ ಮಾಡಬೇಕು. ಕಟ್ಟಡಗಳು ಮತ್ತು ಮೂಲಸೌಕರ್ಯ ಯೋಜನೆಗಳ ಸಂದರ್ಭದಲ್ಲಿ ಮರಗಳಿಗೆ ಕೊಡಲಿ ಹಾಕದಂತೆ ವಿನ್ಯಾಸಗೊಳಿಸಲು ವಾಸ್ತುಶಿಲ್ಪಿಗಳು ಮತ್ತು ಯೋಜಕರಿಗೆ ಸರ್ಕಾರ ಸೂಚನೆಗಳ ನೀಡಬೇಕು, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಇತರ ಏಜೆನ್ಸಿಗಳ ನಡುವೆ ಸೂಕ್ತ ಸಮನ್ವಯ ಇರುವಂತೆ ಮಾಡಲು ಒತ್ತು ನೀಡಬೇಕು ಎಂದು ಹೇಳಿದರು.
Advertisement