ಬೆಂಗಳೂರು: ಉಬರ್ ಕ್ಯಾಬ್ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ, ದೂರು ದಾಖಲು
ಬೆಂಗಳೂರು: ತಿಳಿಯದೆ ಬೇರೆ ಕ್ಯಾಬ್ ಹತ್ತಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಉಬರ್ ಚಾಲಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಭೋಗನಹಳ್ಳಿಯಲ್ಲಿ ಬುಧವಾರ ಈ ಘಟನೆ ನಡೆದಿದೆ.
ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಸಂತ್ರಸ್ತೆಯ ಪತಿ ಅಜಯ್ ಅಗರ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳ್ಳಂದೂರು ಬಳಿಯ ಬೋಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ತನ್ನ ಮಗನನ್ನು ಅಸ್ಪತ್ರೆಗೆ ಕರೆದೊಯ್ಯಲು ಕ್ಯಾಬ್ ಬುಕ್ ಮಾಡಿದ್ದರು. ಅಂತೇಯೇ ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿದೆ. ಆದರೆ ಇದನ್ನು ಗಮನಿಸದ ಮಹಿಳೆ ಮತ್ತು ಮಗ ಕ್ಯಾಬ್ ಹತ್ತಿ ಕುಳಿತರು. ಈ ವೇಳೆ ಇದು ಬೇರೆ ಕ್ಯಾಬ್ ಎಂದು ಹೇಳಿ ಇಬ್ಬರು ವಾಹನದಿಂದ ಇಳಿಯಲು ಯತ್ನಿಸಿದ್ದಾರೆ.
ಮಹಿಳೆ ಮತ್ತು ಮಗ ಹತ್ತುತ್ತಿದ್ದಂತೆಯೇ ಚಾಲಕ ಕ್ಯಾಬ್ ಚಲಾಯಿಸಲು ಮುಂದಾಗಿದ್ದಾನೆ. ಆಗ ಕ್ಯಾಬ್ ಚಾಲಕ ಮತ್ತು ಮಹಿಳೆಯ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಚಾಲಕ ಕ್ಯಾಬ್ ನಿಲ್ಲಿಸಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ.
ತಾಯಿಯ ರಕ್ಷಣೆಗೆ ಬಂದ ಬಾಲಕನ ಮೇಲೂ ಚಾಲಕ ಹಲ್ಲೆ ನಡೆಸಿದ್ದಾನೆ. ಅಪಾರ್ಟ್‌ಮೆಂಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ.
ಅಪಾರ್ಟ್‌ಮೆಂಟ್ ನಿವಾಸಿಗಳು ರಕ್ಷಣೆಗೆ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಕೈಗೊಂಡು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ