ಮತ್ತಿಗೋಡು ಆನೆ ಶಿಬಿರದಲ್ಲಿ ಪುನರ್ವಸತಿ ಪಡೆದಿದ್ದ ಆನೆ 'ಸುಬ್ರಮಣ್ಯ' ಸಾವು
ಮಡಿಕೇರಿ: ಕೊಡಗಿನ ತಿತಿಮತಿ ಬಳಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಪುನರ್ವಸತಿ ಪಡೆದಿದ್ದ ಆನೆ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಹುಣಸೂರು ವಿಭಾಗ ಮತ್ತು ತಿತಿಮತಿ ವಿಭಾಗದ ಅರಣ್ಯಾಧಿಕಾರಿಗಳು ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯ ವ್ಯಾಪ್ತಿಯಲ್ಲಿ ಮೃತದೇಹವನ್ನು ಹೂಳಲಾಯಿತು.
ಈ ವರ್ಷದ ಫೆಬ್ರವರಿಯಲ್ಲಿ ಕಬಡ್ಕ ತಾಲೂಕಿನ ಸುಬ್ರಹ್ಮಣ್ಯ ಅರಣ್ಯ ವ್ಯಾಪ್ತಿಯಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿದ್ದ ಈ ಆನೆಯನ್ನು ಫೆಬ್ರವರಿಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರದ ದಸರಾ ಆನೆ ಅಭಿಮನ್ಯುವಿನ ಸಹಾಯದಿಂದ ಸೆರೆ ಹಿಡಿಯಲಾಗಿತ್ತು. ಬಳಿಕ ಮತ್ತಿಗೋಡು ಶಿಬಿರದಲ್ಲಿ ಪುನವರ್ಸತಿ ಮಾಡಲಾಗಿತ್ತು.
ಸಂಪೂರ್ಣವಾಗಿ ಪಳಗಿದ್ದ ಆನೆಯನ್ನು ಜು.20 ರಂದು ಕ್ರಾಲ್ ನಿಂದ ಹೊರಗೆ ಬಿಡಲಾಗಿತ್ತು. ಹೊಟ್ಟೆ ತುಂಬ ಆಹಾರ ತಿಂದು ಇತರ ಆನೆಗಳ ಒಡನಾಟದಿಂದ ಉತ್ತಮವಾಗಿದ್ದ ಆನೆ ಇದಕ್ಕಿದ್ದಂತೆ ಆಗಸ್ಟ್ 11 ರಂದು ಕುಸಿದು ಬಿದ್ದಿದೆ. ಮೇಲೇಳಾಗದ ಆನೆಯನ್ನು ಸಾಕಾನೆ ಶಿಬಿರದ ವಲಯ ಅರಣ್ಯಾಧಿಕಾರಿ ದಿಲೀಪ್ ಹಾಗೂ ಸಿಬ್ಬಂದಿ ಕ್ರೇನಿನ ಸಹಾಯದಿಂದ ಮೇಲೆತ್ತಲು ಪ್ರಯತ್ನಿಸಿದ್ದಾರೆ. ಆದರೆ ಸಂಪೂರ್ಣ ನಿಶ್ಯಕ್ತಿ ಹೊಂದಿ ಮೇಲೆಳಲಾಗದೇ ಶನಿವಾರ ಮಧ್ಯಾಹ್ನ ಮೃತಪಟ್ಟಿದೆ.
ಆನೆಯು ಅಸ್ವಸ್ಥತೆಯಿಂದ ಬಳಲುತ್ತಿತ್ತು ಎಂದು ಹುಣಸೂರು ವಿಭಾಗದ ಎಸಿಎಫ್ ದಯಾನಂದ್ ದೃಢಪಡಿಸಿದ್ದಾರೆ. ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಚಿಟ್ಟಿಯಪ್ಪ ಅವರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಆನೆಯನ್ನು ಮತ್ತಿಗೋಡು ಅರಣ್ಯ ಪ್ರದೇಶದಲ್ಲಿ ಹೂಳಲಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ