ಉಡುಪಿ: ಮಹಿಳೆಯರ ಸಂಜೀವಿನಿ ಸೂಪರ್ ಮಾರುಕಟ್ಟೆ ಆರಂಭ!

ಇಂದಿನ ದಿನಗಳಲ್ಲಿ ಜನರು ಕೆಲಸ, ಕಚೇರಿ ಎಂದು ಬ್ಯುಸಿಯಾಗಿ ಹೋಗಿದ್ದು, ಮನೆಗಳಿಗೆ ಅಗತ್ಯವಿರುವ ಉತ್ಪನ್ನಗಳ ಖರೀದಿಗೂ ಅವರಿಗೆ ಸಮಯ ಇಲ್ಲದಂತಾಗಿದೆ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಮಾರುಕಟ್ಟೆಗೆ ಹೋಗಬೇಕೆಂದರೆ ದೂರ ಓಡಾಡಬೇಕು...
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸೋಮವಾರ ಉಡುಪಿಯ ಸೂಪರ್ ಮಾರ್ಕೆಟ್‌ನಲ್ಲಿ ಮಾರಾಟಕ್ಕಿರುವ ಕೈಯಿಂದ ತಯಾರಿಸಿದ ಉತ್ಪನ್ನಗಳನ್ನು ವೀಕ್ಷಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸೋಮವಾರ ಉಡುಪಿಯ ಸೂಪರ್ ಮಾರ್ಕೆಟ್‌ನಲ್ಲಿ ಮಾರಾಟಕ್ಕಿರುವ ಕೈಯಿಂದ ತಯಾರಿಸಿದ ಉತ್ಪನ್ನಗಳನ್ನು ವೀಕ್ಷಿಸಿದರು.

ಉಡುಪಿ: ಇಂದಿನ ದಿನಗಳಲ್ಲಿ ಜನರು ಕೆಲಸ, ಕಚೇರಿ ಎಂದು ಬ್ಯುಸಿಯಾಗಿ ಹೋಗಿದ್ದು, ಮನೆಗಳಿಗೆ ಅಗತ್ಯವಿರುವ ಉತ್ಪನ್ನಗಳ ಖರೀದಿಗೂ ಅವರಿಗೆ ಸಮಯ ಇಲ್ಲದಂತಾಗಿದೆ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಮಾರುಕಟ್ಟೆಗೆ ಹೋಗಬೇಕೆಂದರೆ ದೂರ ಓಡಾಡಬೇಕು, ಹುಡುಕಬೇಕು, ಯಾರು ಹೋಗುತ್ತಾರೆ, ಯಾರು ನಡೆಯುತ್ತಾರೆಂದು ಉದಾಸೀನ ಮಾಡುವವರೇ ಹೆಚ್ಚು. ಆದರೆ, ಒಂದೇ ಸೂರಿನಡಿ ಎಲ್ಲಾ ವಸ್ತುಗಳು ಸಿಗುತ್ತವೆ ಎಂದರೆ, ಅದರತ್ತ ಆಕರ್ಷಣೆಗೊಳಗಾಗುತ್ತದೆ.

ಈ ನಿಟ್ಟಿನಲ್ಲಿ ಮಹಿಳೆಯರು ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುವ ಸೂಪರ್‌ ಮಾರ್ಕೆಟ್‌'ವೊಂದು ಉಡುಪಿಯಲ್ಲಿ ಸೋಮವಾರ ಶುಭಾರಂಭಗೊಂಡಿದೆ.

ಮಹಿಳಾ ಸಬಲೀಕರಣದ ಮೂಲಕ ಕುಟುಂಬದ ಆರ್ಥಿಕ ಬೆಳವಣಿಗೆ ಮಾಡುವ ಉದ್ದೇಶದಿಂದ ಜಾರಿಗೆ ತಂದಿರುವ ರಾಷ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯ ಸೂಪರ್‌ ಮಾರ್ಕೆಟನನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೋಮವಾರ ಉದ್ಘಾಟಿಸಿದ್ದಾರೆ.

ಇದೇ ಮೊದಲ ಬಾರಿಗೆ ಎಲ್ಲ ಸೇವೆಗಳನ್ನು ಒದಗಿಸುವ ಸೂಪರ್ ಮಾರ್ಕೆಟ್ ಉಡುಪಿಯ ಹೃದಯಭಾಗದ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಸೋಮವಾರ ಆರಂಭಿಸಲಾಗಿದೆ.

ಈ ಸೂಪರ್ ಮಾರ್ಕೆಟ್‌ನಲ್ಲಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಉತ್ತಮ ಗುಣಮಟ್ಟದ ಅಲಂಕಾರಿಕ, ಒಳಾಂಗಣ ಗಿಡಗಳು, ಯಕ್ಷಗಾನ ಮುಖವಾಡಗಳು ಹ್ಯಾಂಡ್ ಮೇಡ್ ಬ್ಯಾಗ್‌, ಕ್ಯಾಂಡಲ್, ಬಿದಿರಿನ ಬುಟ್ಟಿ , ಗ್ರೋ ಬ್ಯಾಗ್‌, ವಾಲ್‌ ಪೈಂಟಿಂಗ್‌,ಕೀ ಚೈನ್‌, ಜಿಐ ಟ್ಯಾಗ್‌ ಹೊಂದಿರುವ ಕೈ ಮಗ್ಗದ ಸೀರೆಗಳು, ಮಣ್ಣಿನ ಮಡಕೆ, ಡೋರ್ ಮ್ಯಾಟ್, ಪರಿಶುದ್ಧ ಜೇನುತುಪ್ಪ, ಕಜೆ ಅಕ್ಕಿ, ಸಾವಯವ ಬೆಲ್ಲ, ಫಿನೈಲ್, ಸೋಪ್ ಆಯಿಲ್, ಡಿಟರ್ಜೆಂಟ್, ದೇಸಿ ಗೋ ಉತ್ಪನ್ನಗಳು, ವಿವಿಧ ಬಗೆಯ ತಿಂಡಿ, ತಿನಿಸುಗಳು, ಪೂಜಾ ಸಾಮಗ್ರಿ, ಆರೋಗ್ಯಕರ ಪೇಯಗಳು, ಗುಣಮಟ್ಟದ, ಆರೋಗ್ಯಕರ, ಸಾವಯವ ಉತ್ಪನ್ನಗಳು ಲಭ್ಯವಿವೆ ಹೋಮ್‌ ಮೇಡ್‌ ಚಾಕೊಲೇಟ್‌, ಕೇಕ್‌, ಚಿಕ್ಕಿ, ಆಕರ್ಷಕ ಕಲಾಕೃತಿಗಳು ಇತ್ಯಾದಿ ವಸ್ತುಗಳು ಒಂದೇ ಸೂರಿನಡಿ ದೊರೆಯಲಿವೆ.

ಈ ಮಳಿಗೆಯನ್ನು ಉಡುಪಿ ತಾಲೂಕು ಪಂಚಾಯತ್ ಹಾಗೂ ನಬಾರ್ಡ್‌ ಸಂಸ್ಥೆಯ ಸಹಯೋಗದಲ್ಲಿ ಚೇರ್ಕಾಡಿ ಗ್ರಾಪಂನ ಪ್ರಗತಿ GPLFನ ಸಮೃದ್ಧಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ನಡೆಸಲಿದ್ದು, ಜಿಲ್ಲೆಯ ವಿವಿಧ ಸಂಜೀವಿನಿ ಸಂಘದ ಸದಸ್ಯರು ಉತ್ಪಾದಿಸಿರುವ ವಸ್ತುಗಳನ್ನು ಈ ಕೇಂದ್ರದ ಮೂಲಕ ಮಾರಾಟ ಮಾಡಲಿದ್ದಾರೆ.

ಈ ಸೂಪರ್ ಮಾರ್ಕೆಟ್‌ನಲ್ಲಿ, ಸೇವಾ ಸಿಂಧು ಸೇವೆಗಳು, ಪಾಸ್‌ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕಾರ್ಮಿಕರ ನೋಂದಣಿ ಇತ್ಯಾದಿ ಆನ್‌ಲೈನ್ ಸೇವೆಗಳು, ಶಿಕ್ಷಣ, ಬ್ಯೂಟಿಷಿಯನ್, ಟೈಲರಿಂಗ್, ಎಂಬ್ರಾಯಿಡರಿ, ಕುಚ್ಚು ಮೆಹಂದಿ, ಚಂಡೆ, ಯಕ್ಷಗಾನ, ಕ್ಯಾಟರಿಂಗ್, ಕಾನೂನು ಮತ್ತು ಆಪ್ತ ಸಲಹೆ, ಕ್ಯಾಟರಿಂಗ್, ಪೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ, ಆರೋಗ್ಯ ಸಲಹೆ ಸೇವೆಗಳೂ ಕೂಡ ದೊರೆಯಲಿವೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಒಟ್ಟು 7623 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಈ ಗುಂಪುಗಳಲ್ಲಿ 85 ಸಾವಿರಕ್ಕೂ ಅಧಿಕ ಸದಸ್ಯರಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ಸಮುದಾಯ ಬಂಡವಾಳ ನಿಧಿಯನ್ನು ಪಡೆದು ಅನೇಕ ರೀತಿಯ ಜೀವನೋಪಾಯ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಸೂಪರ್ಮಾರ್ಕೆಟ್ ನಡೆಸುವ ಸಮೃದ್ಧಿ ಸ್ವ-ಸಹಾಯ ಗುಂಪಿಗೆ ತಿಂಗಳಿಗೆ 15,000 ರೂ (ಬಾಡಿಗೆಗೆ ಈ 10,000 ರೂ) ನೆರವು ನೀಡಲಿದೆ.

ಮಹಿಳೆಯರು ನಡೆಸುತ್ತಿರುವ ಸೂಪರ್ ಮಾರ್ಕೆಟ್'ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಶಾರೀರಿಕವಾಗಿ ಅಶಕ್ತರಿರಬಹುದು, ಆದರೆ ಮಾನಸಿಕವಾಗಿ ಪುರುಷರಿಗಿಂತ ಹೆಚ್ಚು ಶಕ್ತವಾಗಿದ್ದಾಳೆ. ಫ್ಯಾಬ್ ಇಂಡಿಯಾ, ಗುಡ್ ಅರ್ಥ್ ನಂತ ಮಾರುಕಟ್ಟೆಗಳಿಗಿಂತಲೂ ಸಂಜೀವಿನಿ ಸೂಪರ್ ಮಾರ್ಕೆಟ್ ಅದ್ಭುತವಾಗಿದೆ, ಮಹಿಳೆಯರು ಸ್ವಾವಲಂಬನೆ ಜೀವನ ನಡೆಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಗೃಹ ಜ್ಯೋತಿಯಂತಹ ಕಾರ್ಯಗಳನ್ನು ಜಾರಿಗೆ ತಂದಿದೆ‌. ಮಹಿಳೆಯರ ಮುಖದಲ್ಲಿ ಮಂದಹಾಸ ತರುವುದೇ ಸರ್ಕಾರದ ಉದ್ದೇಶ. ಎಲ್ಲಾ ಮಹಿಳೆಯರು ಸ್ವಾಭಿಮಾನಿ ಜೀವನ ಕಟ್ಟಿಕೊಳ್ಳುವುದು. ಅಚಾರ, ವಿಚಾರಗಳನ್ನು ಎಲ್ಲರೂ ಅಳವಡಿಸಿಕೊಂಡು ಸಾಗಬೇಕು ಎಂದು ಹೇಳಿದರು.

ಇದೇ ವೇಳೆ ಸಂಜೀವಿನಿ ಸೂಪರ್ ಮಾರ್ಕೆಟ್ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವಂತಾಗಲಿ ಎಂದು ಶುಭ ಹಾರೈಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com