ಹುಡುಗಿ ವಿಚಾರಕ್ಕೆ ಜಗಳ: ವಿದ್ಯಾರ್ಥಿಗಳ ನಡುವಿನ ಮಾರಾಮಾರಿಗೆ ಕಗ್ಗದಾಸಪುರದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತ
ಬೆಂಗಳೂರು: ಹುಡುಗಿ ವಿಚಾರಕ್ಕೆ ನಾಲ್ವರು ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ಇದರ ಪರಿಣಾಮ ಕಗ್ಗದಾಸಪುರದ ಜಗದೀಶ್‌ನಗರದ ಬಿಇಎಂಎಲ್ ಟೌನ್‌ಶಿಪ್‌ನಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಸೋಮವಾರ ನಡೆಯಿತು.
ಬಿಇಎಂಎಲ್ ಟೌನ್‌ಶಿಪ್‌ನ ನಡು ರಸ್ತೆಯಲ್ಲಿ ಮೂವರು ವಿದ್ಯಾರ್ಥಿಗಳು ಮತ್ತೋರ್ವ ವಿದ್ಯಾರ್ಥಿಗೆ ಬೆಲ್ಟ್ ನಿಂದ ಥಳಿಸಿದ್ದಾರೆ. ಸಾರ್ವಜನಿಕರು ಮಧ್ಯಪ್ರವೇಶಿಸಿ ತಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ನಂತರ ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳನ್ನು ತಡೆದಿದ್ದಾರೆ. ವಿದ್ಯಾರ್ಥಿಗಳ ನಡುವಿನ ಮಾರಾಮಾರಿಯನ್ನು ಹೆಚ್ಎಎಲ್ ಪೊಲೀಸರು ಖಚಿತಪಡಿಸಿದ್ದಾರೆ.
ಸೋಮವಾರ ಮಧ್ಯಾಹ್ನ 3.15ರ ಸುಮಾರಿಗೆ ಗಲಾಟೆ ನಡೆಯುತ್ತಿದ್ದ ಶಬ್ಧ ಕೇಳಿ ಬಂದಿತ್ತು. ಈ ವೇಳೆ ನೋಡಿದಾಗ 14-15 ವರ್ಷದ ಮೂವರು ಹುಡುಗರು ಕೈಕೈ ಮಿಲಾಯಿಸಿಕೊಂಡು ಜಗಳ ಮಾಡುತ್ತಿದ್ದರು. ಸ್ಥಳೀಯರು, ಪಾದಚಾರಿಗಳೂ ಜಗಳವನ್ನು ನೋಡುತ್ತಿದ್ದರು. ಪೊಲೀಸರಿಗೆ ದೂರು ನೀಡಿ, ಜಗಳ ನಿಲ್ಲಿಸಿ ಎಂದು ಪದೇ ಪದೇ ಮನವಿ ಮಾಡಿದರೂ ಕೇಳಲಿಲ್ಲ. ನಂತರ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಘಟನೆ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದರು. ನಂತರ ಅಸ್ತವ್ಯಸ್ತಗೊಂಡಿದ್ದ ಸಂಚಾರವನ್ನು ಸುಗಮಗೊಳಿಸಿದರು ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳ ಪೋಷಕರನ್ನು ಸಂಪರ್ಕಿಸಲಾಗಿದ್ದು, ಹೆಚ್ಎಎಲ್ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ