
ಬೆಂಗಳೂರು: ಕರ್ನಾಟಕದ ಬರ ಪರಿಸ್ಥಿತಿಯನ್ನು ನೆರೆ ರಾಜ್ಯ ಅರ್ಥ ಮಾಡಿಕೊಳ್ಳಬೇಕು. ನೀರಿನ ಲಭ್ಯತೆ ಮತ್ತು ರಾಜ್ಯದ ಪ್ರಸ್ತುತ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿದ್ದಾರೆಂದು ಸಚಿವ ಚೆಲುವರಾಯಸ್ವಾಮಿ ಬುಧವಾರ ಹೇಳಿದರು.
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ತಮಿಳುನಾಡು ರಾಜ್ಯ ಮತ್ತೆ ಕ್ಯಾತೆ ತೆಗೆದಿರುವ ಹಿನ್ನೆಲೆಯಲ್ಲಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಕಾವೇರಿ ವಿವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಇದೆ. ಆದರೂ ತಮಿಳುನಾಡು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.
ಈ ನಡುವೆ ಕುರುವಾಯಿ ಭತ್ತದ ಬೆಳೆ ಪ್ರದೇಶ ಹೆಚ್ಚಿಸಿ, ಹೆಚ್ಚು ನೀರು ಬಳಸುತ್ತಿರುವ ತಮಿಳುನಾಡು ವಿರುದ್ಧ ಪ್ರತಿಭಟನೆ ದಾಖಲಿಸದ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
''ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯ ಸರಕಾರ ಅಕ್ಷಮ್ಯ ತಪ್ಪು ಮಾಡಿದೆ. ಸರ್ಕಾರ ಸುಪ್ರೀಂ ಕೋರ್ಟ್‌ಗೆ ವಾಸ್ತವವನ್ನು ಮನವರಿಕೆ ಮಾಡಿಕೊಡಬೇಕು ಮತ್ತು ತಮಿಳುನಾಡಿಗೆ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾವೇರಿ ನೀರು ನಿರ್ವಹಣೆಯಲ್ಲಿ ಸರ್ಕಾರದಲ್ಲಿ ಒಮ್ಮತವಿಲ್ಲ ಮತ್ತು ರಾಜ್ಯದ ಪಾಲಿನ ನೀರನ್ನು ಪಡೆಯಲು ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ ಎಂದು ಹೇಳಿದ್ದಾರೆ.
ಈ ನಡುವೆ ತಮಿಳುನಾಡಿಗೆ ನೀರು ಬಿಡುವ ರಾಜ್ಯದ ಕ್ರಮವನ್ನು ಕರ್ನಾಟಕ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಖಂಡಿಸಿದ್ದಾರೆ.
ರಾಜ್ಯದ ರೈತರಿಗೆ ನೀರು ಬಿಡದಿದ್ದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸರಕಾರ ತಮಿಳುನಾಡಿಗೆ ಮನವೊಲಿಸಿ ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.
Advertisement