ಬೆಂಗಳೂರಿನಲ್ಲಿ ಜನಾಂಗೀಯ ದಾಳಿ: ಸಿಕ್ಕಿಂ ವ್ಯಕ್ತಿಯ ಮೇಲೆ ಅಮಾನುಷ ಹಲ್ಲೆ..!

ಸಿಕ್ಕಿಂನ 30 ವರ್ಷದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಕ್ಕಿಂನ 30 ವರ್ಷದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೆ ದಿನೇಶ್ ಸುಬ್ಬ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಪಶ್ಚಿಮ ಸಿಕ್ಕಿಂ ಮೂಲದವರಾಗಿರುವ ಇವರು,  ಎಲೆಕ್ಟ್ರಾನಿಕ್ಸ್ ಸಿಟಿ 1 ನೇ ಹಂತದಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಿದ್ದಾರೆ. ನಗರದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸಹೋದರ ಹಾಗೂ ಸ್ನೇಹತರೊಂದಿಗೆ ಪಾರ್ಟಿ ಮಾಡಿ ಬುಧವಾರ ಬೆಳಗಿನ ಜಾವ 3-4 ಗಂಟೆ ಸುಮಾರಿಗೆ ವಾಪಸ್ಸಾಗುತ್ತಿದ್ದರು. ದೊಡ್ಡತೊಗೂರಿನ ಪಿಸಿಆರ್ ಗಾರ್ಡನ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ದುಷ್ಕರ್ಮಿಗಳ ಗುಂಪೊಂಬು ದಿನೇಶ್ ಅವರನ್ನು ನೋಡಿ, ಚೈನೀಸ್, ಚೈನೀಸ್ ಎಂದು ಕರೆದಿದ್ದಾರೆ. ಈ ವೇಳೆ ನಾನು ಸಿಕ್ಕಿಂನ ಭಾರತೀಯ ಎಂದು ದಿನೇಶ್ ಉತ್ತರಿಸಿದ್ದಾರೆ.

ಕೂಡಲೇ ಹತ್ತಿರಕ್ಕೆ ಬಂದಿರುವ ದುಷ್ಕರ್ಮಿಗಳು, ದಿನೇಶ್ ಅವರ ಮೇಲೆ ಶಸ್ತ್ರಾಸ್ತ್ರಗಳ ಬಳಸಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಸ್ಥಳೀಯ ಕಟ್ಟಡವೊಂದರ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ದಿನೇಶ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಮುಖ ಹಾಗೂ ತಲೆಗೆ 9 ಹೊಲಿಗೆಗಳನ್ನು ಹಾಕಲಾಗಿದೆ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆಗಸ್ಟ್ 14 ರಂದು ವಿವಾಹ ವಾರ್ಷಿಕೋತ್ಸವ ಇತ್ತು. ಹೀಗಾಗಿ ಸಹೋದರ ಆಗಸ್ಟ್ 15ರ ರಾತ್ರಿ ಪಾರ್ಟಿ ನೀಡಿದ್ದ. ಪಾರ್ಟಿ ಮಾಡಿ ಮನೆಗೆ ಹೊರಟಿದ್ದ. ಮನೆಯಿಂದ 100 ಮೀಟರ್ ದೂರದಲ್ಲಿ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳು ಚೈನೀಸ್ ಎಂದು ಕರೆದು, ಸಹೋದರನ ಮೇಲೆ ದಾಳಿ ನಡೆಸಿದ್ದಾರೆ. ಇದೊಂದು ಜನಾಂಗೀಯ ದಾಳಿಯಾಗಿದೆ. ಬೆಡ್ ರೆಸ್ಟ್ ನಲ್ಲಿರುವಂತೆ ಸಹೋದರನಿಗೆ ವೈದ್ಯರು ಸಲಹೆ ನೀಡಿದ್ದಾರೆಂದು ನಗರದಲ್ಲಿ 2009ರಿಂದಲೂ ವಾಸವಿರುವ ದಿನೇಶ್ ಅವರ ಸಹೋದರ ದೀಪಕ್ ದೊರ್ಜಿಯವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com