ಬೆಳಗಾವಿ: 2 ಎಕರೆ ಜಮೀನು ಬರೆಸಿಕೊಳ್ಳಲು ಪತಿಗೆ ಉಪ್ಪಿಟ್ಟಿನಲ್ಲಿ ವಿಷವಿಕ್ಕಿದ ಪತ್ನಿ; ಸಹೋದರನ ಜೊತೆ ಮಹಿಳೆ ಬಂಧನ

ಪತಿಯ ಆಸ್ತಿಗಾಗಿ ಮಹಿಳೆಯೊಬ್ಬರು ಆಹಾರದಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನಿಸಿರುವ ಘಟನೆ ಸೌಂದತ್ತಿ ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಸಂಜೆ ಘಟನೆ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಪತಿಯ ಆಸ್ತಿಗಾಗಿ ಮಹಿಳೆಯೊಬ್ಬರು ಆಹಾರದಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನಿಸಿರುವ ಘಟನೆ ಸೌಂದತ್ತಿ ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಸಂಜೆ ಘಟನೆ ಬೆಳಕಿಗೆ ಬಂದಿದೆ.

ಎರಡು ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಉದ್ದೇಶದಿಂದ ಮಹಿಳೆಯೊಬ್ಬರು, ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿದ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ವಿಷಪೂರಿತ ಉಪ್ಪಿಟ್ಟು ತಿಂದ, ಸವದತ್ತಿ ತಾಲ್ಲೂಕಿನ ಗೋರಾಬಾಳ ಗ್ರಾಮದ ನಿಂಗಪ್ಪ ಫಕೀರಪ್ಪ ಹಮಾನಿ (35) ಅವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪತ್ನಿ ಸಾವಕ್ಕ (32) ಹಾಗೂ ಆಕೆಯ ಸಹೋದರ ಫಕೀರಪ್ಪ ಲಕ್ಷ್ಮಣ ಸಿಂಧೋಗಿ (30) ಯನ್ನು ಬಂಧಿಸಲಾಗಿದೆ,

ಆಗಸ್ಟ್‌ 11ರಂದು ಘಟನೆ ನಡೆದಿದೆ. ಅಂದು ಬೆಳಿಗ್ಗೆ ಸಾವಕ್ಕ ಅವರು ಪತಿ ನಿಂಗಪ್ಪಗೆ ಉಪಾಹಾರಕ್ಕಾಗಿ ಉಪ್ಪಿಟ್ಟು ಮಾಡಿದ್ದರು. ಅದನ್ನು ತಿಂದ ಕೆಲ ಗಂಟೆಗಳಲ್ಲಿ ನಿಂಗಪ್ಪ ತೀವ್ರ ನೋವಿನಿಂದ ಬಳಲಿದರು.ಕುಟುಂಬದವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ, ವೈದ್ಯರ ಸಲಹೆ ಮೇರೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮೂಲಗಳ ಪ್ರಕಾರ ನಿಂಗಪ್ಪ ಹಮಾನಿ ಎರಡು ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಜಮೀನು ಕಬಳಿಸುವ ಉದ್ದೇಶದಿಂದ ಫಕೀರಪ್ಪ ಸಿಂದೋಗಿ ಎಂಬಾತ ತನ್ನ ಸಹೋದರಿ ಸಾವಕ್ಕಳನ್ನು ಪತಿಯನ್ನು ಕೊಲ್ಲುವಂತೆ ಪ್ರಚೋದಿಸಿದ್ದ ಎನ್ನಲಾಗಿದೆ. ಆಗ ಉಪ್ಪಿಟ್ಟುವಿನಲ್ಲಿ ವಿಷ ಬೆರೆಸಿದ್ದಾಳೆ ಎನ್ನಲಾದ ಸಾವಕ್ಕ ತನ್ನ ಪತಿಗೆ ತಿನ್ನಲು ಕೊಟ್ಟಿದ್ದಾಳೆ.

ಮನೆಯಲ್ಲಿದ್ದ ನಾಯಿ, ಬೆಕ್ಕು ಸಹ ಉಳಿದ ಆಹಾರವನ್ನು ತಿಂದು ಸಾವನ್ನಪ್ಪಿವೆ. ಈ  ವಿಷಯ ತಿಳಿದು ಸೊಸೆಯ ಕೃತ್ಯದಿಂದ ಅನುಮಾನಗೊಂಡ ತಂದೆ ನಿಂಗಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ವಶದಲ್ಲಿರುವ ಆರೋಪಿಗಳಾದ ಸಾವಕ್ಕ ಮತ್ತು ಫಕೀರಪ್ಪ ಸಿಂದೋಗಿ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com