ಇಂಡಿಗೋ ವಿಮಾನದಲ್ಲಿ ಗಗನಸಖಿಗೇ ಕಿರುಕುಳ, ಪ್ರಯಾಣಿಕನಿಗೆ ಜೈಲು

ಇಂಡಿಗೋ ವಿಮಾನದಲ್ಲಿ ಗಗನಸಖಿಗೇ ಕಿರುಕುಳ ನೀಡಿದ ಆರೋಪದ ಮೇರೆಗೆ ಪ್ರಯಾಣಿಕರೊಬ್ಬರನ್ನು ಜೈಲಿಗೆ ಅಟ್ಟಿರುವ ಪ್ರಕರಣ ವರದಿಯಾಗಿದೆ.
ಇಂಡಿಗೋ ವಿಮಾನಯಾನ ಸಂಸ್ಥೆ
ಇಂಡಿಗೋ ವಿಮಾನಯಾನ ಸಂಸ್ಥೆ

ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಗಗನಸಖಿಗೇ ಕಿರುಕುಳ ನೀಡಿದ ಆರೋಪದ ಮೇರೆಗೆ ಪ್ರಯಾಣಿಕರೊಬ್ಬರನ್ನು ಜೈಲಿಗೆ ಅಟ್ಟಿರುವ ಪ್ರಕರಣ ವರದಿಯಾಗಿದೆ.

ಆಗಸ್ಟ್ 18 ಶುಕ್ರವಾರ ಸಂಜೆ ಮಾಲ್ಡೀವ್ಸ್ ನ ಮಾಲೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತನಗೆ ಸೇವೆ ಸಲ್ಲಿಸಲು ಬಂದ ಗಗನಸಖಿಯೊಬ್ಬರಿಗೆ 51 ವರ್ಷದ ಮಾಲ್ಡೀವ್ಸ್ ನಿವಾಸಿಯೊಬ್ಬರು ಕಿರುಕುಳ ನೀಡಿ ಇತರ ಇಬ್ಬರು ಮಹಿಳಾ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವಿಚಾರವನ್ನು ಗಗನಸಖಿಯರು ಪೈಲಟ್ ಗೆ ಮಾಹಿತಿ ನೀಡಿದ್ದ ಪೈಲಟ್ ನೀಡಿದ ದೂರಿನ ಮೇರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಿಮಾನ ಬಂದಿಳಿದ ನಂತರ ಆರೋಪಿ ಪ್ರಯಾಣಿಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಲ್ಡೀವ್ಸ್‌ ಮೂಲದ ಪುರುಷ ಪ್ರಯಾಣಿಕ ಅಕ್ರಮ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 354 (ಯಾವುದೇ ಮಹಿಳೆಯ ಮೇಲೆ ದೌರ್ಜನ್ಯ ಅಥವಾ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಮತ್ತು 409 (ಮಹಿಳೆಯರ ನಮ್ರತೆಗೆ ಅವಮಾನ ಮಾಡುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಾಲೆಯ ವೆಲಾನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಸಂಖ್ಯೆ 6E 1128 ವಿಮಾನವು ಮಧ್ಯಾಹ್ನ 3.48 ಕ್ಕೆ ಟೇಕ್ ಆಫ್ ಆದ ನಂತರ ಈ ಘಟನೆ ಸಂಭವಿಸಿದೆ. ಸೀಟ್ ನಂಬರ್ 38ಡಿಯಲ್ಲಿ ಕುಳಿತಿದ್ದ ಆರೋಪಿ ಅಹ್ಮದ್, ಗಗನಸಖಿಯ ಬಳಿ ಒಂದು ಗ್ಲಾಸ್ ಬಿಯರ್ ಮತ್ತು ಗೋಡಂಬಿಯನ್ನು ಕೇಳಿದ್ದಾರೆ. ಅದನ್ನು ನೀಡಲು ಹೋದ ಗಗನಸಖಿಯನ್ನು ಉದ್ದೇಶಿಸಿ  “ನಾನು ಕಳೆದ 51 ವರ್ಷಗಳಿಂದ ನಿಮ್ಮಂತಹ ಹುಡುಗಿಯನ್ನು ಹುಡುಕುತ್ತಿದ್ದೇನೆ ಎಂದು ಹೇಳಿದ್ದಾನೆ. ಅಲ್ಲದೆ ಸೇವೆಗೆ ನೀವು ಎಷ್ಟು ಶುಲ್ಕ ವಿಧಿಸುತ್ತೀರಿ ಮತ್ತು ನೀವು ಯಾವಾಗ  ಫ್ರೀಯಾಗಿ ಸಿಗುತ್ತೀರಿ ಎಂದು ಅಸಭ್ಯವಾಗಿ ಪ್ರಶ್ನಿಸಿದ್ದಾನೆ. ಬಳಿಕ 100 ಡಾಲರ್ ಹಣ ನೀಡಿ ಬಿಲ್ ಮೊತ್ತ 10 ಡಾಲರ್ ನೊಂದಿಗೆ ಉಳಿದ 90 ಡಾಲರ್ ಹಣವನ್ನು ನೀವೇ ಇಟ್ಟುಕೊಳ್ಳಿ ಎಂದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಯಾಣಿಕನ ಅಶಿಸ್ತಿನ ಘಟನೆ ದೃಢೀಕರಿಸಿದ ಇಂಡಿಗೋ
ಇನ್ನು ವಿಮಾನದಲ್ಲಿ ಆದ ಘಟನೆಯನ್ನು ಇಂಡಿಗೋ ವಿಮಾನಯಾನ ಸಂಸ್ಥೆ ದೃಢೀಕರಿಸಿದ್ದು, ಇನ್ನೊಬ್ಬ ಫ್ಲೈಟ್ ಅಟೆಂಡೆಂಟ್ ಅವರು ಆರ್ಡರ್ ಮಾಡಿದ್ದನ್ನು ಪಾವತಿಸಲು ಕೇಳಲು ಹೋದಾಗ, ಅಹ್ಮದ್ ಗಗನಸಖಿಯರ ಕೈಗಳನ್ನು ತನ್ನ ಜೇಬಿನೊಳಗೆ ಇರಿಸಿ ನಗದು ತೆಗೆದುಕೊಳ್ಳುವಂತೆ ಮತ್ತು ಅಶ್ಲೀಲ ಸನ್ನೆ ಮಾಡಿದರು ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ. ವಿಮಾನವು ಕೆಐಎಯ ಟರ್ಮಿನಲ್ 1 ಅನ್ನು ಸಂಜೆ 6.15 ಕ್ಕೆ ತಲುಪಿತು. ಮತ್ತೊಬ್ಬ ಮಹಿಳಾ ಫ್ಲೈಟ್ ಅಟೆಂಡೆಂಟ್ ಅವರನ್ನು ಸ್ವಲ್ಪ ಸಮಯ ಕುಳಿತುಕೊಳ್ಳುವಂತೆ ಕೇಳಿದಾಗ ಅಹ್ಮದ್ ತಾನು ಮಾಡಿದ ಪ್ರಮಾದದ ಅರಿವಾಗಿ  ವಿಮಾನದಿಂದ ಇಳಿಯಲು ಅವಸರದಿಂದ ಎದ್ದರು. ಈ ವೇಳೆ ಗಗನಸಖಿ ಅವರನ್ನು ತಡೆದಿದ್ದು, ಆಕೆಯೊಂದಿಗೂ ಆತ ಅನುಚಿತವಾಗಿ ವರ್ತಿಸಿದ್ದಾನೆ. ಇಳಿಯುವ ಮೊದಲು, ಕ್ಯಾಬಿನ್ ಸಿಬ್ಬಂದಿ ಘಟನೆಯ ಬಗ್ಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅವರ ಆಗಮನಕ್ಕಾಗಿ ಕಾಯುತ್ತಿದ್ದ ಅವರು ವಿಮಾನದಿಂದ ಹೊರಬಂದ ತಕ್ಷಣ ಅವರನ್ನು ವಶಕ್ಕೆ ತೆಗೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದೆ.

ಪ್ರಸ್ತುತ ಆರೋಪಿ ಅಹ್ಮದ್‌ನನ್ನು ಠಾಣೆಗೆ ಕರೆದೊಯ್ದು ಶುಕ್ರವಾರ ರಾತ್ರಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಂಡಿಗೋದ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದಾರೆ. ಇಂಡಿಗೋ ತನ್ನ ವಿಮಾನದಲ್ಲಿ ಘಟನೆ ಸಂಭವಿಸಿದೆ ಎಂದು ದೃಢಪಡಿಸಿದೆ. 

ಇಂಡಿಗೋ ಹೇಳಿಕೆ ಬಿಡುಗಡೆ: 
“ಆಗಸ್ಟ್ 18, 2023 ರಂದು ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ 6E1128 ವಿಮಾನದಲ್ಲಿ ಇಂಡಿಗೋ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಂದ ಅನುಚಿತ ವರ್ತನೆಗೊಳಗಾಗಿದ್ದು, ಪ್ರೋಟೋಕಾಲ್ ಪ್ರಕಾರ, ಪ್ರಯಾಣಿಕರನ್ನು ಅಶಿಸ್ತಿನೆಂದು ಘೋಷಿಸಲಾಯಿತು ಮತ್ತು ಆಗಮನದ ನಂತರ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಸ್ಥಳೀಯ ಪೊಲೀಸರಿಗೆ ಪ್ರಯಾಣಿಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಮುಂದಿನ ಕ್ರಮಕ್ಕಾಗಿ ವಿಷಯವನ್ನು ಅಧಿಕಾರಿಗಳಿಗೆ ಉಲ್ಲೇಖಿಸಲಾಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com