ಬರಪೀಡಿತ ತಾಲೂಕು ಘೋಷಣೆಗೆ ಪ್ರಕ್ರಿಯೆ ಆರಂಭ: ಬೆಳೆ ಸಮೀಕ್ಷೆಗೆ ಸರ್ಕಾರದ ಆದೇಶ!

ಮಳೆ ಕೊರತೆಯಾಗಿರುವ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ಬೆಳೆ ಸಮೀಕ್ಷೆ ನಡೆಸಿ 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಮಳೆ ಕೊರತೆಯಾಗಿರುವ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ಬೆಳೆ ಸಮೀಕ್ಷೆ ನಡೆಸಿ 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿ ಪರಾಮರ್ಶಿಸಿ, ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾದ ಸಚಿವ ಸಂಪುಟ ಉಪ ಸಮಿತಿಯ ಸಭೆ ಮಂಗಳವಾರ ನಡೆಯಿತು.‌

ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ರಾಜ್ಯದ ಕೆಲವು ಭಾಗಗಳಲ್ಲಿ ಬೆಳೆಯಾಗಿರುವ ಬೆಳೆಗಳು ಒಣಗುವ ಅಪಾಯವನ್ನು ಎದುರಿಸುತ್ತಿವೆ. ಆಗಸ್ಟ್ ಕೊನೆಯ ವಾರದಲ್ಲಿಯೂ ಮಳೆಯಾಗುವ ಮುನ್ಸೂಚನೆಗಳಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯವೇ ಬರ ಘೋಷಿಸಬೇಕಾಗಿದೆ. ಮಳೆ ಕೊರತೆ, ಒಣ ಹವೆ‌, ಬಿತ್ತನೆ ಪ್ರದೇಶ, ತೇವಾಂಶ ಕೊರತೆ, ಬೆಳೆಗಳ ಸ್ಥಿತಿ, ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟವನ್ನು ಅವಲೋಕಿಸಿ ಬರ ಘೋಷಿಸಲಾಗುತ್ತದೆ. ರಾಜ್ಯದ ಸುಮಾರು 120 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ ಆದರೆ, ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವುದಕ್ಕೂ ಮುನ್ನ ಕೇಂದ್ರ ಸರ್ಕಾರದ ಸೂಚನೆಯಂತೆ ಬೆಳೆ ಸಮೀಕ್ಷೆ ಮಾಡಬೇಕು ಎಂದು ಹೇಳಿದರು.

ಪ್ರತಿ ತಾಲೂಕಿನಲ್ಲಿ 10 ಹಳ್ಳಿಗಳನ್ನು ಆಯ್ಕೆ ಮಾಡುವ ಮೂಲಕ ತಾಲೂಕು ಮಟ್ಟದಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲನೆ ಮಾಡಲಾಗುತ್ತದೆ. ಗ್ರಾಮಗಳಲ್ಲಿನ ಐದು ಪ್ರಮುಖ ಬೆಳೆಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಾರೆ. ನಂತರ ವರದಿ ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ.

ಕೇಂದ್ರದ ಮಾರ್ಗಸೂಚಿಯಂತೆ ಪ್ರತಿ ತಾಲ್ಲೂಕಿನಲ್ಲಿ ತಲಾ 10 ಗ್ರಾಮಗಳನ್ನು ಆಯ್ಕೆ ಮಾಡಿ, 10 ದಿನಗಳೊಳಗೆ ವರದಿ ಸಲ್ಲಿಸಲು ತಕ್ಷಣವೇ ಸಮೀಕ್ಷೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ವರದಿ ಬಂದ ನಂತರ ಸಂಪುಟ ಉಪಸಮಿತಿ ಸಭೆ ನಡೆಸಿ ವರದಿಗಳನ್ನು ಪರಿಶೀಲಿಸಿ, ಬರ ಪೀಡಿತ ತಾಲೂಕುಗಳ ಘೋಷಣೆಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕೃಷಿ ಸಾಲದ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಈ ನಡವೆ ಪ್ರಕೃತಿ ವಿಕೋಪದಿಂದ ಗ್ರಾಮೀಣ ಬ್ಯಾಂಕ್ ನಿಂದ ಪಡೆದಿರವ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಬಳ್ಳಾರಿ ಜಿಲ್ಲೆಯ ರೈತರು ತಿಳಿಸಿದ್ದು, ನೆರುವ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.

ಇದೇ ವೇಳೆ ಸಮಸ್ಯೆಯನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು)ಗಳಿಗೆ ಸೂಚನೆ ನೀಡಿದರು.

ರೈತರಿಗೆ ನಿರಂತರ ವಿದ್ಯುತ್ ಪೂರೈಸಿ: ಸಿಎಂ
ರೈತರ ಐಟಿ ಸೆಟ್ ಗಳಿಗೆ ನಿರಂತರ ವಿದ್ಯುತ್ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕೆಂದು ಇಂಧನ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ವಿದ್ಯುತ್ ಕಳ್ಳತನವಾಗದಂತೆ, ಸೋರಿಕೆಯಾಗದಂತೆ ಮತ್ತು ಶೂನ್ಯ ಅವಘಡಗಳನ್ನು ಖಾತ್ರಿಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com