ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿಗಳನ್ನು ದರೋಡೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

ನಾಗರಭಾವಿಯಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್‌ಎಲ್‌ಎಸ್‌ಐಯು) ಇಬ್ಬರು ವಿದ್ಯಾರ್ಥಿಗಳನ್ನು ಇತ್ತೀಚೆಗೆ ದರೋಡೆ ಮಾಡಿದ್ದ ಇಬ್ಬರು ದುಷ್ಕರ್ಮಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಗರಭಾವಿಯಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್‌ಎಲ್‌ಎಸ್‌ಐಯು) ಇಬ್ಬರು ವಿದ್ಯಾರ್ಥಿಗಳನ್ನು ಇತ್ತೀಚೆಗೆ ದರೋಡೆ ಮಾಡಿದ್ದ ಇಬ್ಬರು ದುಷ್ಕರ್ಮಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತರು ಇಬ್ಬರೂ ಎರಡನೇ ವರ್ಷದ ಕಾನೂನು ವಿದ್ಯಾರ್ಥಿಗಳಾಗಿದ್ದು, ಸೋಮವಾರ ನಸುಕಿನಲ್ಲಿ ಕಾಲೇಜು ಗೇಟ್‌ನ ಹೊರಗಿನ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ದರೋಡೆ ಮಾಡಲಾಗಿದೆ. ಆರೋಪಿಗಳಿಬ್ಬರೂ ಬಸವೇಶ್ವರನಗರದ ಫರ್ನಿಚರ್ ಅಂಗಡಿ ಉದ್ಯೋಗಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಒಬ್ಬಾತ ಉತ್ತರ ಪ್ರದೇಶದ ಮೂಲದವನು.

ಆರೋಪಿಗಳಲ್ಲಿ ಒಬ್ಬಾತ ಸಂತ್ರಸ್ತರಿಂದ ಕಸಿದುಕೊಂಡಿದ್ದ ಫೋನ್‌ಗಳನ್ನು ಹಿಂತಿರುಗಿಸಲು ಯುಪಿಐ ವಹಿವಾಟು ನಡೆಸಲು ಸಂತ್ರಸ್ತರಿಗೆ ಫೋನ್ ಸಂಖ್ಯೆಯನ್ನು ನೀಡಿದ್ದರಿಂದ ಪೊಲೀಸರು ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು.

ಪೊಲೀಸರು ಫೋನ್ ನಂಬರ್ ಟ್ರ್ಯಾಕ್ ಮಾಡಿ ಬುಧವಾರ ಆರೋಪಿಗಳನ್ನು ಬಂಧಿಸಿದ್ದಾರೆ. ಕಳ್ಳತನವಾಗಿದ್ದ ಮೊಬೈಲ್‌ ಫೋನ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರೂ ಇದೇ ಮೊದಲ ಬಾರಿಗೆ ಅಪರಾಧ ಎಸಗಿದವರಾಗಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳನ್ನು ಉತ್ತರ ಪ್ರದೇಶದ ಬಿ ರಾಹುಲ್ ಕುಮಾರ್ ಮತ್ತು ಕುರುಬರಹಳ್ಳಿ ನಿವಾಸಿಗಳಾದ ಎಸ್ ಇರ್ಫಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಸಂತ್ರಸ್ತರು ಕತ್ತಲೆಯಲ್ಲಿ ಬಸ್ ನಿಲ್ದಾಣದೊಳಗೆ ಕುಳಿತಿರುವುದನ್ನು ನೋಡಿದ್ದಾರೆ. ಈ ವೇಳೆ ಚಾಕುವಿನಿಂದ ಬೆದರಿಸಿ ಸಂತ್ರಸ್ತರ 45,000 ರೂಪಾಯಿ ಮೌಲ್ಯದ ಮೊಬೈಲ್‌ನೊಂದಿಗೆ ಪರಾರಿಯಾಗಿದ್ದಾರೆ.

ನಂತರ, ಸಂತ್ರಸ್ತರು ಮತ್ತೊಂದು ಸಂಖ್ಯೆಯಿಂದ ತಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ಆರೋಪಿಗಳು ಅವರ ಮೊಬೈಲ್ ಫೋನ್‌ಗಳನ್ನು ಮರಳಿ ಪಡೆಯಲು 15,000 ರೂ. ಗಳ ಯುಪಿಐ ವಹಿವಾಟು ಮಾಡುವಂತೆ ಕೇಳಿದ್ದಾರೆ. ಸಂತ್ರಸ್ತರು 5,000 ರೂ. ಗಳನ್ನು ಕೊಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆರೋಪಿಗಳು ಮೊಬೈಲ್ ಫೋನ್‌ಗಳನ್ನು ಹಿಂತಿರುಗಿಸಿಲ್ಲ. ಈ ಸಂಬಂಧ ಸಂತ್ರಸ್ತರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿದ್ಯಾರ್ಥಿಗಳನ್ನು ಗೌತಮ್ ರಾಜ್ ಫುಲೇರಾ ಮತ್ತು ನಿಶು ರಾಣಿ ಎಂದು ಗುರುತಿಸಲಾಗಿದೆ. ಸೋಮವಾರ ನಸುಕಿನ ವೇಳೆ ಫುಲೇರಾ ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ. ಆರೋಪಿಗಳು ಬಿಳಿ ಬಣ್ಣದ ಹೋಂಡಾ ಆಕ್ಟಿವಾದಲ್ಲಿ ಬಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com