ದಕ್ಷಿಣ ಕನ್ನಡ: ಪೊಲೀಸ್ ಠಾಣೆ ಬಳಿಯೇ ಯುವತಿಯ ಕತ್ತು ಸೀಳಿದ ಯುವಕ, ಚಿಕಿತ್ಸೆಗೆ ಸ್ಪಂದಿಸದೆ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಪೊಲೀಸ್ ಠಾಣೆ ಬಳಿ ಗುರುವಾರ ಹಾಡಹಗಲೇ 18 ವರ್ಷದ ಯುವತಿಯೊಬ್ಬಳ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನಿವಾಸಿ ಗೌರಿ ಎಂದು ಗುರುತಿಸಲಾಗಿದೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಪೊಲೀಸ್ ಠಾಣೆ ಬಳಿ ಗುರುವಾರ ಹಾಡಹಗಲೇ 18 ವರ್ಷದ ಯುವತಿಯೊಬ್ಬಳ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನಿವಾಸಿ ಗೌರಿ ಎಂದು ಗುರುತಿಸಲಾಗಿದೆ. 

ಆರೋಪಿ ಪದ್ಮರಾಜ್ (23) ಎಂಬಾತ ಅರ್ತ್ ಮೂವರ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಪುತ್ತೂರು ಪೇಟೆಯ ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಗೌರಿ ಎಂಬಾಕೆಯೊಂದಿಗೆ ಸಂಬಂಧವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಎಸ್‌ಪಿ ಸಿಬಿ ರಿಶ್ಯಂತ್ ತಿಳಿಸಿದ್ದಾರೆ.

ಗುರುವಾರ, ಗೌರಿ ತನ್ನ ಕೆಲಸದ ಸ್ಥಳದಲ್ಲಿದ್ದಾಗ ಆರೋಪಿ ಆಕೆಯನ್ನು ಮಾತನಾಡಬೇಕೆಂದು ಕರೆದಿದ್ದಾನೆ. ಈ ವೇಳೆ, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪದಿಂದ ಸ್ಥಳದಿಂದ ತೆರಳಿದ್ದ ಪದ್ಮರಾಜ್, ಸ್ವಲ್ಪ ಹೊತ್ತಿನ ನಂತರ ಹಿಂತಿರುಗಿ ಬಂದು ಚಾಕುವಿನಿಂದ ಆಕೆಯ ಕತ್ತು ಸೀಳಿದ್ದಾನೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಅವರಿಬ್ಬರು ಬೇರ್ಪಟ್ಟಿದ್ದು, ಮತ್ತೆ ಸಂಬಂಧ ಮುಂದುವರಿಸುವಂತೆ ಆರೋಪಿ ಗೌರಿಗೆ ಕಿರುಕುಳ ನೀಡಿದ್ದಾನೆ. ಪೊಲೀಸರಿಗೆ ದೂರು ನೀಡುವುದಾಗಿ ಆಕೆ ಬೆದರಿಕೆ ಹಾಕಿದ್ದರಿಂದ ಕೋಪಗೊಂಡ ಪದ್ಮರಾಜ್ ಆಕೆಯ ಮೇಲೆ ಹಲ್ಲೆ ನಡೆಸಿರಬಹುದು ಎಂದು ಎಸ್‌ಪಿ ಹೇಳಿದ್ದಾರೆ.

ಗಾಯಗೊಂಡ ಗೌರಿಯನ್ನು ಮೊದಲು ಪುತ್ತೂರಿನ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಮಂಗಳೂರಿನ ಮತ್ತೊಂದು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಳೆ. ಆರೋಪಿಯು 3-4 ಬಾರಿ ಆಕೆಯ ಕತ್ತು ಸೀಳಿದ್ದಾನೆ ಎಂದು ತಿಳಿಸಿದ್ದಾರೆ. 

ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. ಕಿರುಕುಳದ ಕುರಿತು ಪದ್ಮರಾಜ್ ವಿರುದ್ಧ ಈ ಹಿಂದೆ ಗೌರಿ ಪೊಲೀಸರಿಗೆ ದೂರು ನೀಡಿದ್ದರು ಎಂಬ ಮಾಹಿತಿ ನಮಗೆ ಇದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com