ತಾಳಿ ಕಟ್ಟುವ ವೇಳೆ ಮದುವೆಗೆ ನಿರಾಕರಿಸಿದ ವಧು: ಪ್ರಿಯಕರನೊಂದಿಗೆ ಕಳುಹಿಸಿಕೊಟ್ಟ ಪೋಷಕರು!
ತುಮಕೂರು: ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮದುವೆ ಬೇಡ ಎಂದು ವಧುವೊಬ್ಬಳು ಹಸೆಮಣೆಯಿಂದ ಮೇಲೆದ್ದು ಹೋದ ಸಿನಿಮಾ ಶೈಲಿಯ ಪ್ರಸಂಗವೊಂದು ತುಮಕೂರಿನಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದಲ್ಲಿ ಘಟನೆ ನಡೆದಿದ್ದು, ಮದುವೆ ಅರ್ಧಕ್ಕೆ ಮುರಿದುಬಿದ್ದಿದೆ. ದಿವ್ಯಾ ಹೆಸರಿನ ವಧು, ತಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಹೀಗಾಗಿ ನನಗೆ ಮದುವೆ ಬೇಡ ಎಂದು ಕಲ್ಯಾಣ ಮಂಟಪದಿಂದ ಹೊರನಡೆದಿದ್ದಾಳೆ.
ಕೊಳಾಲ ಗ್ರಾಮದ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ನಲ್ಲಿ ಮದುವೆ ನಡೆಯುತ್ತಿತ್ತು. ವರ ವೆಂಕಟೇಶ್ ಜೊತೆ ಮದುವೆ ನಡೆಯುತ್ತಿತ್ತು. ನಿನ್ನೆ ರಾತ್ರಿ ರಿಸೆಪ್ಷನ್ನಲ್ಲಿ ದಿವ್ಯಾ, ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದಳು. ಆದರೆ, ಮರುದಿನ ಬೆಳಗ್ಗೆ ಮುಹೂರ್ತಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದಿದ್ದಾಳೆ.
ವರ ವೆಂಕಟೇಶ್, ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು ಗೋವಿಂದರಾಜು ಪುತ್ರ. ವಧು ದಿವ್ಯಾ ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಅಂಜನಮ್ಮ ನರಸಿಂಹಮೂರ್ತಿ ಪುತ್ರಿ. ವಧು ಮದುವೆ ಬೇಡ ಎಂದು ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಉಂಟಾಗಿತ್ತು. ಈ ವೇಳೆ ಎರಡೂ ಕಡೆಯವರಿಂದ ಮಾತಿನ ಚಕಮಕಿ ನಡೆದಿತ್ತು. ನಂತರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಬಳಿಕ ಪೊಲೀಸರ ಸಮ್ಮುಖದಲ್ಲಿ ಎರಡು ಕುಟುಂಬಗಳ ಸಂಧಾನ ನಡೆಯಿತು. ಮದುವೆಯ ಖರ್ಚು ಭರಿಸುವುದಾಗಿ ವಧುವಿನ ಕುಟುಂಬಸ್ಥರು ಒಪ್ಪಿಕೊಂಡಿದ್ದು, ನಂತರ ವಧುವಿನ ಪೋಷಕರು, ದಿವ್ಯಾ ಇಷ್ಟಪಟ್ಟ ಯುವಕನ ಜೊತೆಗೆ ಆಕೆಯನ್ನು ಕಳುಹಿಸಿಕೊಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ