ಬಳ್ಳಾರಿ: ‘ನಷ್ಟ ಮಾಡಿಕೊಂಡು ತಿರುಪತಿ ಲಡ್ಡುಗೆ ನಂದಿನಿ ತುಪ್ಪವನ್ನು ಪೂರೈಸುವ ಪ್ರಶ್ನೆಯೇ ಇಲ್ಲ’ ಎಂದು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟಪಡಿಸಿದರು.
'ಇದು (ಕೆಎಂಎಫ್) ರೈತರ ಒಕ್ಕೂಟವಾಗಿದ್ದು, ನಷ್ಟ ಮಾಡಿಕೊಂಡು ತಿರುಪತಿಗೆ ತುಪ್ಪ ಸರಬರಾಜು ಮಾಡಲು ಸಾಧ್ಯವೇ?. ಮಾರುಕಟ್ಟೆಯಲ್ಲಿ ನಂದಿನಿ ತುಪ್ಪಕ್ಕೆ ಅಪಾರ ಬೇಡಿಕೆಯಿದೆ. ಗ್ರಾಹಕರು ಒಂದು ಲೀಟರ್ ತುಪ್ಪವನ್ನು 610 ರೂ.ಗೆ ಖರೀದಿಸುತ್ತಿದ್ದಾರೆ' ಎಂದರು.
ನಗರದಲ್ಲಿ ಸೋಮವಾರ ನಡೆದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಂದಿನಿ ತುಪ್ಪದ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ’ ಎಂದರು.
‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಆಡಳಿತ ನಡೆಸಿದ್ದು ಯಾರು, ಯಾವ ಸರ್ಕಾರವಿತ್ತು? ಅವರು ತಿರುಪತಿಗೆ ಎಷ್ಟು ಲೀಟರ್ ತುಪ್ಪ ಪೂರೈಸಿದ್ದಾರೆ?. ಬಿಜೆಪಿ ಸರ್ಕಾರದ 4 ವರ್ಷಗಳ ಅವಧಿಯಲ್ಲಿ ಒಂದೇ ಒಂದು ಲೀಟರ್ ತುಪ್ಪವನ್ನು ಕೂಡ ತಿರುಪತಿಗೆ ಕಳಿಸಿಲ್ಲ’ ಎಂದು ಹೇಳಿದರು.
'ಕೆಎಂಎಫ್ ಒಂದು ವರ್ಷದಲ್ಲಿ ಸರಾಸರಿ 30,000 ಟನ್ ತುಪ್ಪವನ್ನು ಉತ್ಪಾದಿಸುತ್ತದೆ. ಆದರೆ, ಇನ್ನೂ 10,000 ಟನ್ ತುಪ್ಪಕ್ಕೆ ಬೇಡಿಕೆ ಇದೆ. ಹಾಲಿನ ಪ್ರೋತ್ಸಾಹಧನ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಿದ ನಂತರ, ಹಾಲಿನ ಸಂಸ್ಕರಣೆ ಪ್ರಮಾಣವೂ ಏರಿದೆ. ಸಂಗ್ರಹಣೆಯು ದಿನಕ್ಕೆ 86 ಲಕ್ಷ ಲೀಟರ್‌ನಿಂದ 87 ಲಕ್ಷ ಲೀಟರ್‌ಗೆ ಏರಿದೆ' ಎಂದು ಅವರು ತಿಳಿಸಿದರು.
ಕಲಬುರಗಿ ವಿಭಾಗ ಹೊರತುಪಡಿಸಿ ಉಳಿದೆಲ್ಲ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಪೂರೈಕೆಯಾಗುತ್ತಿದೆ. ಹಾಲಿನ ಪುಡಿ ಉತ್ಪಾದನೆ ಕಡಿಮೆಯಾದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
ಒಂದು ಕೆಜಿ ಹಾಲಿನ ಪುಡಿ ಉತ್ಪಾದಿಸಲು 8 ಲೀಟರ್ ಹಾಲು ಬೇಕಾಗುತ್ತದೆ. ಪ್ರತಿ ಕೆಜಿಗೆ ಉತ್ಪಾದನಾ ವೆಚ್ಚ 350 ರೂ. ತಗುಲಲಿದೆ. ಆದರೆ, ಸರ್ಕಾರ ಪ್ರತಿ ಕೆಜಿಗೆ ಕೇವಲ 300 ರೂ. ಪಾವತಿಸುತ್ತಿದೆ. ಹೀಗಾಗಿ ಹಾಲಿನ ಪುಡಿ ಉತ್ಪಾದನೆ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement