ಬೆಂಗಳೂರು: ಯುವ ವಿಜ್ಞಾನಿಯ ಅಟ್ಟಾಡಿಸಿ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳು, FIR ದಾಖಲು

ಯುವ ವಿಜ್ಞಾನಿಯೊಬ್ಬರ ಮೇಲೆ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಾನಿಗೊಳಗಾದ ಕಾರು
ಹಾನಿಗೊಳಗಾದ ಕಾರು

ಬೆಂಗಳೂರು: ಯುವ ವಿಜ್ಞಾನಿಯೊಬ್ಬರ ಮೇಲೆ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರಿಗೆ ಕಲ್ಲೆಸೆದು ಹಲ್ಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶುತೋಷ್ ಸಿಂಗ್ ಅವರು ತಮ್ಮ ಕ್ವಿಡ್ ಕಾರಿನಲ್ಲಿ ರಾವತ್ತನಹಳ್ಳಿ ಮುಖ್ಯರಸ್ತೆಯಲ್ಲಿ ಹೊರಟಿದ್ದರು. ಇದೇ ವೇಳೆ ಅವರ ಕಾರಿಗೆ ಕಲ್ಲು ಎಸೆಯಲಾಗಿದೆ. ನಂತರ, ಕಾರು ಹಿಂಬಾಲಿಸಿದ್ದ ದುಷ್ಕರ್ಮಿಗಳು ಮಾರ್ಗಮಧ್ಯೆಯೇ ಹಲ್ಲೆಗೆ ಯತ್ನಿಸಿದ್ದರು. ಆದರೆ, ಯುವ ವಿಜ್ಞಾನಿ ಆರೋಪಿಗಳಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸ್ವತಃ ಯುವ ವಿಜ್ಞಾನಿ ಆಶುತೋಷ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನ ರಾವತ್ತನಹಳ್ಳಿ ಮುಖ್ಯರಸ್ತೆಯಲ್ಲಿ ಆಗಸ್ಟ್ 24 ರ ರಾತ್ರಿ 12:45 ಸುಮಾರಿನಲ್ಲಿ ಸ್ಥಳೀಯ ದುಷ್ಕರ್ಮಿಗಳು ತಮ್ಮ ಕಾರಿನ ಮೇಲೆ ಹಲ್ಲೆ ಮಾಡಿ ಕಲ್ಲು ಎಸೆದಿದ್ದಾರೆ. ಅವರು ನನ್ನ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದರು. ಮಚ್ಚು ಲಾಂಗ್ ನಿಂದ ಬೆನ್ನಟ್ಟಿ ಹಲ್ಲೆಗೆ ಯತ್ನಿಸಿದರು. ನನ್ನ ಕಾರಿನ ಹಿಂಭಾಗದ ಗಾಜು ಒಡೆದು ಹಾಕಿದರು ಎಂದು ಹೇಳಿದ್ದಾರೆ. ಅಂತೆಯೇ ಈ ಸಂಬಂಧ ತಾವು ಪೊಲೀಸ್ ದೂರು ನೀಡಿದ್ದು, ಮಾದನಾಯಕನ ಹಳ್ಳಿ ಪೊಲೀಸ್ ಠಾಣೆ ಎಫ್ ಐಆರ್ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ. 

‘ಆಗಸ್ಟ್ 24ರ ತಡರಾತ್ರಿ ನಡೆದಿರುವ ಘಟನೆ ಸಂಬಂಧ ದೂರು ಪಡೆಯಲಾಗಿದೆ. ಕೃತ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ಯಾವ ಕಾರಣಕ್ಕೆ ಕಲ್ಲು ಎಸೆಯಲಾಗಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಗಂಭೀರ ವಿಚಾರ ಎಂದ ಅಲೋಕ್ ಕುಮಾರ್
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ಸುರಕ್ಷತೆ) ಅಲೋಕ್ ಕುಮಾರ್ ಅವರು ಇದನ್ನು 'ಗಂಭೀರ ಘಟನೆ' ಎಂದು ಕರೆದಿದ್ದು, ಮಾತ್ರವಲ್ಲದೇ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com